ಆರ್ಥಿಕ ಸಂಕಷ್ಟದಿಂದ ಜೀವ ಕಳೆದುಕೊಂಡ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ಖ್ಯಾತ ನಟ..‌

ನಿಜಕ್ಕೂ ಈ ಕೊರೊನಾ ಅದೆಷ್ಟು ಜನರನ್ನು ಇಲ್ಲವಾಗಿಸುವುದೋ ಆ ಭಗವಂತನೇ ಬಲ್ಲ.. ಅದರಲ್ಲೂ ಈ ವರ್ಷ ಸ್ಯಾಂಡಲ್ವುಡ್ ಗೆ ಅತ್ಯಂತ ಕರಾಳ ವರ್ಷ ಎನ್ನಬಹುದು.. ಸಾಲು ಸಾಲು ಕಲಾವಿದರು ಇಲ್ಲವಾಗುತ್ತಿದ್ದಾರೆ.. ಅತ್ತ ಒಂದು ನೋವು ಮರೆಯುವ ಮುನ್ನವೇ ಮತ್ತೊಂದು ನೋವಿನ ಸುದ್ದಿ ಬರುತ್ತಿದೆ.. ಒಂದು ಕಡೆ ಸೋಂಕು ಬಂದು ಜೀವ ಹೋಗುತ್ತಿದ್ದರೆ ಮತ್ತೊಂದು ಕಡೆ ಜೀವನ ಕಟ್ಟಿಕೊಳ್ಳಲಾಗದೇ ಜೀವಗಳು ಹೋಗುತ್ತಿವೆ.. ಇದೀಗ ಕಿರುತೆರೆ ಹಾಗೂ ಬೆಳ್ಳಿತೆರೆಯ ಖ್ಯಾತ ನಟ ಸುಶೀಲ್ ಕುಮಾರ್ ಆರ್ಥಿಕ ಸಂಕಷ್ಟದಿಂದ ಜೀವ ಕಳೆದುಕೊಂಡಿದ್ದಾರೆ..

ಹೌದು ಮೂಲತಃ ಮಂಡ್ಯದವರಾದ ಸುಶೀಲ್ ಕುಮಾರ್ ನಟನೆಯಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದಿದ್ದರು.. ನಟನೆಯ ಜೊತೆಗೆ ಜಿಮ್ ಟ್ರೈನರ್ ಆಗಿಯೂ ಕೆಲಸ ಮಾಡುತ್ತಿದ್ದರು.. ಅತ್ತ ಕೊರೊನಾದಿಂದಾಗಿ ಯಾವುದೇ ಚಿತ್ರೀಕರಣವಿಲ್ಲದೆ.. ಇತ್ತ ಜಿಮ್ ಗಳು ಸಹ ತೆರೆಯದೇ ಆರ್ಥಿಕ ಸಂಕಷ್ಟ ಎದುರಾಗಿ ಮಂಡ್ಯದ ತಮ್ಮ ಮನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.. ಈ ಬಗ್ಗೆ ದುನಿಯಾ ವಿಜಯ್ ಅವರು ವಿಷಯ ತಿಳಿಸಿದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಸಲಗ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ.

ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡ್ತಿದ್ರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದ್ಕೊಂಡಿದ್ದೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ; ನಿನ್ನೆ ಇರಬೇಕು ಜೀವ ಕಳೆದುಕೊಂಡಿದ್ದಾನೆ.. ಅಂತ ಗೊತ್ತಾಯ್ತು. ನನಗೆ ಈಗಲೂ ನಂಬೋಕೆ ಆಗ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಈ ರೀತಿ ಮಾಡ್ಕೊಳ್ಳೋದು ಅಂದರೆ ಏನು? ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಇದು ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಹೀಗೆ ಉತ್ತರ ಕಾಣೋದಾದ್ರೆ ಬಹುಶಃ ಭೂಮೀಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ..

ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಜತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇನೇ ನಮಗಿಷ್ಟೊಂದು ನೋವಾಗ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ? ಈಗ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸ್ತಿಲ್ಲ! ಯಾಕೆಂದರೆ ಪರಿಸ್ಥಿತಿ ಹಾಗಿದೆ. ಜನ ಕೊರೊನಾ ರೋಗಕ್ಕಷ್ಟೇ ಭಯಪಡುತ್ತಿಲ್ಲ.. ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನನ್ನ ಮನವಿ ಅಂಥವರಿಗೂ ಕೂಡ ಆಗಿದೆ.

ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸೋಕೂ ಹೌದು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ.. ವೇದನೆ.

ನೀವೇನೂ ಸತ್ತು ಹೋಗ್ತೀರಿ.. ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು. ಸುಶೀಲ್ ಆತ್ಮಕ್ಕೆ ‌ಶಾಂತಿ‌ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂಥ ದುಃಖ ಎದುರಿಸುವ ಸಂದರ್ಭ ಬಾರದಿರಲಿ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ‌‌..

ಇವರು ಅಂತಃಪುರ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.. ಆನಂತರ ಅನೇಕ ಧಾರಾವಾಹಿ ಹಾಗೂ ಸಲಗ, ಕಮರೊಟ್ಟು ಚೆಕ್ ಪೋಸ್ಟ್ ಹೀಗೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.. ನಟ ಜೆಕೆ ಅವರಿಗೂ ಬಹಳ ಆಪ್ತನಾಗಿದ್ದ ಸುಶೀಲ್ ಸಾವಿಗೆ ಜೆಕೆ, ಕಿರುತೆರೆ ಸ್ನೇಹಿತರು ಹಾಗೂ ಸಿನಿಮಾದ ಸ್ನೇಹಿತರು‌ ಕಂಬನಿ ಮಿಡಿದಿದ್ದಾರೆ..