ಪುನೀತ್ ಗೆ ಕರ್ನಾಟಕ ರತ್ನ.. ಅಂಬರೀಶ್ ಗೆ ಯಾಕಿಲ್ಲ.. ಸುಮಲತಾ ಅಂಬರೀಶ್ ಹೇಳಿದ ಮಾತು ನೋಡಿ..

ಕಳೆದ ಇಪ್ಪತ್ತಾರು ದಿನಗಳಿಂದ ನಾಡಿನಲ್ಲಿ ಸಾಕಷ್ಟು ಸಂಭ್ರಮದ ದಿನಗಳು ಬಂದರೂ ಸಹ ಒಂದು ರೀತಿ ಸೂತಕದ ವಾತಾವರಣದಲ್ಲಿಯೇ ಇರುವಂತಾಗಿದೆ.. ಅಪ್ಪು ಅಗಲಿಕೆ ಅರಗಿಸಿಕೊಳ್ಳದ್ದಾಗಿದೆ.. ಕುಟುಂಬ ಇದರಿಂದ ಹೊರ ಬಂದಿಲ್ಲ.. ಕುಟುಂಬ ಮಾತ್ರವಲ್ಲ ನಾಡಿನ ಜನರೂ ಸಹ ಇದರಿಂದ ಹೊರ ಬರಲಾಗದೆ ಅಪ್ಪುವಿನ ನೆನಪುಗಳು ಕಾಡುತ್ತಿರುವುದಂತೂ ಸತ್ಯ.. ಇನ್ನು ಅಪ್ಪು ಅಗಲಿದ ನಂತರ ಪುನೀತ್ ಅವರ ಕುರಿತು ಸಾಕಷ್ಟು ವಿಚಾರಗಳು ಹೊರ ಬಂದವು.. ಇನ್ನು ಇತ್ತ ಪುನೀತ್ ಅವರು ಮಾಡಿದ ಸಮಾಜ ಸೇವೆ ಕಲಾ ಸೇವೆ ಜನರು ಅವರ ಮೇಲಿಟ್ಟಿದ್ದ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿತು..

ಆದರೆ ಪುನೀತ್ ಅವರಿಗೆ ಕರ್ನಾಟಕ ರತ್ನ ನೀಡಿದ ಬಳಿಕ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡವು.. ಪುನೀತ್ ಅವರಿಗೆ ಸರ್ಕಾರ ನೀಡಿದ ಗೌರವಕ್ಕೆ ಬಹಳಷ್ಟು ಜನರು ಧನ್ಯವಾದಗಳನ್ನು ತಿಳಿಸಿದರು.. ಅದರ ಜೊತೆಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಹಾಗೂ ಅವರಿಗೇಕೆ ಕರ್ನಾಟಕ ರತ್ನ ನೀಡಲಿಲ್ಲ ಎಂಬ ವಿಚಾರದ ಚರ್ಚೆಯೂ ಆರಂಭವಾಯಿತು.. ಆದರೀಗ ಅದರ ಜೊತೆಗೆ ಅಂಬರೀಶ್ ಅವರ ಅಭಿಮಾನಿಗಳೂ ಸಹ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ನೀಡಬೇಕು.. ಜೊತೆಗೆ ರಸ್ತೆಗಳಿಗೆ ಅಂಬರೀಶ್ ಅವರ ಹೆಸರಿಡಬೇಕು ಎಂದು ಹೇಳುತ್ತಿದ್ದು ಈ ಬಗ್ಗೆ ಸರ್ಕಾರಕ್ಕೂ ಸಹ ತಿಳಿಸುವ ಸಿದ್ಧತೆಯನ್ನು ಮಾಡಿಕೊಂಡಿದ್ದರು.. ಆದರೀಗ ಈ ಬಗ್ಗೆ ಸುಮಲತಾ ಅಂಬರೀಶ್ ಅವರು ಹೇಳಿರುವ ಮಾತು ನೋಡಿ..

ನನ್ನ ಮನವಿ, ನಮ್ಮ ಪ್ರೀತಿಯ ಡಾ.ಅಂಬರೀಶ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಶ್ ಅವರ ಸ್ಮಾರಕ ಅಭಿವೃದ್ಧಿಗೊಳಿಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ನೋವಿನ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ”.

”ಇದರೊಂದಿಗೆ ಚಿತ್ರರಂಗ, ಅಭಿಮಾನಿಗಳು, ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದುದರಿಂದ, ಈ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ. ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು”.

”ಎಲ್ಲಾ ಪ್ರಶಸ್ತಿಗಳನ್ನು ಮೀರಿದಂತ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನು ಬಯಸಿದವರಲ್ಲ. ಹೀಗಾಗಿ ಅಂಬರೀಷ್ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ”.

ಆದುದರಿಂದ, ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತ ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಕಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರಿಗೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..