ಅತಿ ಸುಲಭವಾಗಿ ರುಚಿಯಾದ ಪಾನಿಪುರಿ ಮನೆಯಲ್ಲೇ ಮಾಡುವ ವಿಧಾನ..

ಪಾನಿಪುರಿಯನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುತ್ತಾರೆ. ಮನೆಯಲ್ಲಿಯೇ ಪಾನಿಪುರಿಯನ್ನು ತಯಾರಿಸಿಕೊಟ್ಟರೆ ಮಕ್ಕಳು ಖುಷಿ ಪಡುತ್ತಾರೆ. ಪಾನಿಪುರಿಯನ್ನು ಸುಲಭವಾಗಿ ತಯಾರಿಸಬಹುದಾಗಿದ್ದು, ಅದರ ರೆಸಿಪಿ ನೋಡಿ ಇಲ್ಲಿದೆ..

ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು – 1 ಕಟ್ಟು, ಪುದೀನಾ ಸೊಪ್ಪು – 1 ಕಟ್ಟು, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ – 2 ರಿಂದ 3, ಹುಣಸೆಹಣ್ಣು – ದೊಡ್ಡ ನಿಂಬೆಗಾತ್ರದಷ್ಟು, ನಿಂಬೆಹಣ್ಣು – 1, ಕಾಳುಮೆಣಸು ಪುಡಿ – 2 ಟೀ ಚಮಚ, ಎಣ್ಣೆ – ಕರಿಯಲು, ಉಪ್ಪು – ರುಚಿಗೆ ತಕ್ಕಷ್ಟು, 5 ದೊಡ್ಡ ಆಲೂಗಡ್ಡೆ, ಕೆಂಪು ಮೆಣಸಿನ ಪುಡಿ – 1 ಚಮಚ
ಮಧ್ಯಮಗಾತ್ರದ ಈರುಳ್ಳಿ – 2, ಚಾಟ್ ಮಸಾಲ.

ಮಾಡುವ ವಿಧಾನ:
ಪಾನಿಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಹಾಕಿ ರುಬ್ಬಿಕೊಳ್ಳಿ. ಇದನ್ನು ದೊಡ್ಡ ಬೌಲ್’ಗೆ ಹಾಕಿ 1 ½ ಲೋಟ ನೀರು ಸೇರಿಸಿ ಇಟ್ಟುಕೊಳ್ಳಬೇಕು. ಇದಕ್ಕೆ ಹುಣಸೆ ರಸ, ಚಾಟ್ ಮಸಾಲ, ಕಾಳು ಮೆಣಸು, ಖಾರದ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಲಿ.

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು. ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿ ಮಾಡಿದ ಕಾಳುಮೆಣಸು, ಉಪ್ಪು, ನಿಂಬೆ ರಸ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಈಗ ಬಾಣಲೆಗೆ ಎಣ್ಣೆ ಬಿಟ್ಟು, ಅಂಗಡಿಯಿಂದ ತಂದ ಪೂರಿಗಳನ್ನು ಕರಿಯಿರಿ. ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಂಡು ಪೂರಿಯ ಅರ್ಧಭಾಗದವರೆಗೆ ಆಲೂ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಈರುಳ್ಳಿ, ಸೇವ್ ಹಾಗೂ ಪಾನಿಯನ್ನು ತುಂಬಿಸಿದರೆ ರುಚಿಕರವಾದ ಪಾನಿಪುರಿ ರೆಡಿ.