ಬಾಯಿ ಚಪ್ಪರಿಸೋ ಪಾನಿಪುರಿ ಮನೆಯಲ್ಲೇ ಮಾಡುವ ಸುಲಭ ವಿಧಾನ ನೋಡಿ..

ಚಾಟ್ಸ್ ಅಂದರೆ ಹೆಚ್ಚಿನವರು ಇಷ್ಟ ಪಟ್ಟು ತಿನ್ನುತ್ತಾರೆ. ಅದರಲ್ಲೂ ಪಾನಿಪುರಿಯ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆ. ಸಾಯಾಂಕಾಲ ಪಾನಿಪುರಿ ತಿನ್ನುವುದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುತ್ತಾರೆ. ಆದರೆ ತಳ್ಳುಗಾಡಿಯಲ್ಲಿರುವ ಪಾನಿಪುರಿಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ. ತಳ್ಳುಗಾಡಿಯಲ್ಲಿ ಸಿಗುವ ಪಾನಿಪುರಿ ಶುದ್ಧತೆ ಕುರಿತು ಕೇಳಿಬರುವ ಊಹಾಪೋಹಗಳಿಂದಾಗಿ ತಿನ್ನಲು ಮನಸ್ಸು ಒಪ್ಪುವುದಿಲ್ಲ. ಈ ಕಡೆ ಪಾನಿಪುರಿ ತಿನ್ನುವುದನ್ನು ಬಿಡಲು ಮನಸ್ಸು ಬರುವುದಿಲ್ಲ. ಅಷ್ಟೆಲ್ಲ ಧರ್ಮ ಸಂಕಟ ಏಕೆ? ಪಾನಿಪುರಿಯನ್ನು ಮನೆಯಲ್ಲಿಯೆ ತಯಾರಿಸಬಹುದಲ್ಲವೆ? ಪಾನಿಪುರಿಯನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಚಿರೋಟಿ ರವಾ – 2 ಕಪ್.. ಮೈದಾ ಹಿಟ್ಟು – 2 ಚಮಚ.. ಎಣ್ಣೆ – ಕರಿಯಲು.. ಕೊತ್ತಂಬರಿ ಸೊಪ್ಪು – 1 ಕಟ್ಟು.. ಪುದೀನಾ ಸೊಪ್ಪು – 1 ಕಟ್ಟು.. ಹಸಿಮೆಣಸಿನಕಾಯಿ – 2 ರಿಂದ 3.. ಹುಣಸೆಹಣ್ಣು – ದೊಡ್ಡ ನಿಂಬೆಗಾತ್ರದಷ್ಟು.. ನಿಂಬೆಹಣ್ಣು – 1.. ಕಾಳುಮೆಣಸು ಪುಡಿ – 2 ಟೀ ಚಮಚ.. ಜೀರಿಗೆ – 2 ಟೀ ಚಮಚ.. ಉಪ್ಪು – ರುಚಿಗೆ ತಕ್ಕಷ್ಟು.. ಬ್ಲಾಕ್ ಸಾಲ್ಟ್.. 1 ದೊಡ್ಡ ಆಲೂಗಡ್ಡೆ.. ಬಟಾಣಿ – ¼ ಕಪ್.. ಕೆಂಪು ಮೆಣಸಿನ ಪುಡಿ – ½ ಚಮಚ.. ಆಮ್ ಚ್ಯೂರ್) – ¼ ಚಮಚ.. ಮಧ್ಯಮಗಾತ್ರದ ಈರುಳ್ಳಿ – 1.. ಚಾಟ್ ಮಸಾಲ..

ತಯಾರಿಸುವ ವಿಧಾನ: ಚಿರೋಟಿ ರವಾ, ಮೈದಾ ಹಿಟ್ಟು, ಸ್ವಲ್ಪ ಎಣ್ಣೆ ಹಾಕಿ ಮೃದುವಾಗಿ ಕಲಸಿಕೊಳ್ಳಿ. ಜಾಸ್ತಿ ನೀರು ಬಳಸಬೇಡಿ. ನಂತರ 20 ನಿಮಿಷ ನೆನೆಯಲು ಬಿಡಿ. ಆಮೇಲೆ ಕಾಯಲು ಎಣ್ಣೆ ಬಿಟ್ಟು, ಎಣ್ಣೆ ಹಾಕಿಕೊಂಡು ಹಿಟ್ಟನ್ನು ಲಟ್ಟಿಸಿಕೊಳ್ಳಿ. ಸಣ್ಣ ಡಬ್ಬಿಯ ಮುಚ್ಚಳ ತೆಗೆದುಕೊಂಡು ಕಟ್ ಮಾಡಿ ಕರಿಯಿರಿ.

ನಂತರ ಪಾನಿಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸಿನ ಕಾಯಿ ಹಾಕಿ ರುಬ್ಬಿಕೊಳ್ಳಿ. ಇದನ್ನು ಚೆನ್ನಾಗಿ ಸೋಸಿ ಇಟ್ಟುಕೊಳ್ಳಬೇಕು. ಇದಕ್ಕೆ ಹುಣಸೆ ರಸ, ಚಾಟ್ ಮಸಾಲ, ಕಾಳು ಮೆಣಸು, ಬ್ಲಾಕ್ ಸಾಲ್ಟ್ ಸೇರಿಸಿ ಮಿಕ್ಸ್ ಮಾಡಿ. ಸೋಸಿಕೊಂಡ ರಸಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ ಮತ್ತು ನಿಂಬೆರಸವನ್ನು ಸೇರಿಸಿ ಕಲಸಬೇಕು. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಲಿ.

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು. ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ, ಬೇಯಿಸಿದ ಬಟಾಣಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಈಗ ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಂಡು ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿಯನ್ನು ತುಂಬಿಸಿದರೆ ರುಚಿಕರವಾದ ಪಾನಿಪುರಿ ರೆಡಿ.