ಯಾರಿಗಾಗಿ ಬದುಕಿರಲಿ ಎಂದಾಗ ಏನು ಮಾಡ್ಲಿ.. ರವಿ ಮಂಡ್ಯ ಅವರ ಬಗ್ಗೆ ಭಾವುಕರಾದ ನಂದಿನಿ ಗೌಡ..

ಮೊನ್ನೆಯಷ್ಟೇ ಕಿರುತೆರೆಯ‌ ಪ್ರತಿಭಾನ್ವಿತ ಕಲಾವಿದ ರವಿ‌ ಮಂಡ್ಯ ಅವರು ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿದ್ದು ಇನ್ನೂ ಸಹ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.. ಅದರಲ್ಲೂ ಅವರ ಜೊತೆ ಒಡನಾಟವಿದ್ದ ಕಿರುತೆರೆ ಕಲಾವಿದರು ರವಿ ಅವರ ಜೊತೆಗಿನ ನಂಟನ್ನು ನೆನೆದು ಭಾವುಕರಾಗುತ್ತಿದ್ದಾರೆ.. ರವಿ ಮಂಡ್ಯ ಅವರ ಅತ್ಯಾಪ್ತರಲ್ಲಿ‌ ಒಬ್ಬರು ಎಂದರೆ ಅದು ನಟಿ ನಂದಿನಿ ಗೌಡ ಅವರು.. ರವಿ ಅವರ ಜೊತೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಷ್ಟೇ ಅಲ್ಲದೇ ಅವರ ಜೀವನದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.. ಮಂಡ್ಯ ರವಿ ಅವರಿಗೆ ಬಹಳ ಆತ್ಮೀಯರಾಗಿದ್ದ ನಂದಿನಿ ಅವರು ಇದೀಗ ರವಿ ಅವರು ಆಡಿದ ಮಾತುಗಳನ್ನು ನೆನೆದು ಕಣ್ಣೀರಾಗುತ್ತಿದ್ದಾರೆ..

ಹೌದು ರವಿ ಪ್ರಸಾದ್ ಮಂಡ್ಯ ಅವರು ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದು ಸಾಕಷ್ಟು ದಿನಗಳಿಂದ ಚಿಕಿತ್ಸೆ ಪಡೆದರೂ ಸಹ ಕೊನೆಕೊನೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.. ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ ರವಿ ಮಂಡ್ಯ ಅವರ ಬಗ್ಗೆ ಸಹನಟಿ ನಂದಿನಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ರವಿ ಪ್ರಸಾದ್ ಮಂಡ್ಯ, ಕೆಲವರ ಪಾಲಿಗೆ ರವಿ, ಇನ್ನು ಕೆಲವರ ಪಾಲಿಗೆ ಮಂಡ್ಯ ಆದ್ರೆ ನನಗೆ ನೀನು ಯಾವತ್ತಿದ್ರು ಮಗಾ.. ಅಷ್ಟೆ. ನಿನ್ನ ಜೊತೆ ಮಾತ್ರ ನಾನು ಪಕ್ಕ ಮಂಡ್ಯ ಸೊಗಡಲ್ಲಿ ಮಾತಾಡ್ತಿದ್ದೆ, ಹಾಗೆ ಮಾತಾಡಿದ್ರೆ ಇಬ್ಬರಿಗೂ ಸಮಾಧಾನ. ಬಹುಶಃ ನನ್ನ ಲೈಫ್ ಅಲ್ಲಿ ಯಾರನ್ನಾದ್ರೂ ಹೋಗೋ, ಬಾರೋ ಅಂತ ಮಾತಾಡಿಸಿದ್ರೆ ಅದು ನಿನ್ನ ಮಾತ್ರ. ನಾನು ನಿನ್ನ ಸೀನಿಯರ್ ಅಂತ ಯಾವಾಗಲೂ ಜೋರು ಮಾಡ್ತಿದ್ದೆ.. ನನ್ನ ಪ್ರೀತಿಯ ಸಹಕಲಾವಿದ ನೀನು.. ನಾನು ನೀನು ಮತ್ತೆ ಒಟ್ಟಿಗೆ ನಟಿಸಬೇಕು ಅನ್ನೋದು ಹಾಗೆ ಉಳಿದುಹೋಯಿತು ನೋಡು..

ನಿನ್ನ ಹುಟ್ಟಿದ ಹಬ್ಬಕ್ಕೆ ಎಷ್ಟು ಜನ ಪೋಸ್ಟ್ ಹಾಕಿದ್ರು ನೆನಪಿಲ್ಲ, ಆದ್ರೆ ಇವತ್ತು ಫೇಸ್‌ಬುಕ್‌ ತುಂಬಾ ನೀನೆ, ಹಿಂಸೆ ಕಣೋ ನಿನ್ನ ಈ ರೀತಿ ನೋಡೋದಿಕ್ಕೆ, ನಿನ್ನ ಎಷ್ಟು ಜನ ಇಷ್ಟಪಡ್ತಾರೆ, ಮೆಚ್ಚಿಕೊಂಡಿದ್ದಾರೆ ಅಂತ ನೋಡಕ್ಕಾದ್ರು ನೀನು ಇರಬೇಕಿತ್ತು.. ನಿನ್ನ ಬಗ್ಗೆ ಬರೆಯೋದಕ್ಕೆ ಶುರು ಮಾಡಿದಾಗ ಕಾಡಿದ್ದು ನಿನ್ನ ಬಗ್ಗೆ ಏನು ಬರೀಲಿ ಅನ್ನೋದು ಅಲ್ಲ, ಏನೆಲ್ಲಾ ಬರೀಲಿ ಅನ್ನೋದು.. ನಿನ್ನ ಜೊತೆ ಕಳೆದ ದಿನಗಳು, ಪದಬಂಧಕ್ಕೆ ನಾವು ಜಗಳ ಆಡಿದ್ದು, ಇಬ್ಬರೂ ಜೀವನದ ಕೆಳ ಹಂತದಲ್ಲಿ ಇದ್ದಾಗ ಒಬ್ಬರಿಗೊಬ್ಬರು ಕಾಳಜಿ ತೋರಿಸಿದ್ದು, ದೃಶ್ಯದ ಮಧ್ಯದಲ್ಲಿ ಮಾಡಿದ ತರಲೆಗಳು, ನಗು, ಮಾತು, ಕಿತ್ತಾಟ.. ಎಲ್ಲಾ ಕಣ್ಮುಂದೆ ಬರ್ತಿದೆ ಮಗಾ..

ಮಿಂಚು ಸೀರಿಯಲ್ ಮಾಡುವಾಗ ನಿನ್ನ ಮದುವೆ ನಿಶ್ಚಯ ಆಗಿದ್ದು, ಹುಡುಗಿ ನೋಡಿಕೊಂಡು ಬಂದ ಮೇಲೆ ನೀನು ನನ್ನ ಹತ್ರ ಹೇಳಿದ್ದೆ ನಂದು ಏನು ಗೊತ್ತಾ? ಮಾಲತಿ ನೋಡಿದ ತಕ್ಷಣ ನನ್ನ ಮನಸ್ಸಿಗೆ ಒಂದು ಹಾಡು ಬಂತು.. ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ, ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ..

ಅವತ್ತು ನೀನು ಇದು ಹೇಳಿದಾಗ ನನಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಇವತ್ತು ಮಾಲತಿ ನಾನು ಯಾರಿಗಾಗಿ ಬದುಕಿರಲಿ ಅಂತ ಪ್ರಶ್ನೆ ಮಾಡಿದಾಗ.. ಮತ್ತೆ ಈ ಹಾಡು ನೆನಪಾಯ್ತು.. ಸಿಟ್ಟು, ಅಸಹಾಯಕತೆ, ದುಃಖ ಉಮ್ಮಳಸಿ ಬಂತು.. ಅಷ್ಟು ಆತುರ ಏನಿತ್ತು ನಿನಗೆ, ಇನ್ನಷ್ಟು ವರ್ಷ ಇವಳ ಜೊತೆ ಇರಬಹುದಿತ್ತು ಅಲ್ವಾ, ಕನಸಿನ ಜೋಕಾಲಿ ಜೊತೆಯಾಗಿ ಜೀಕ್ತಾ? ಯಾಕೋ ಹೀಗೆ ಮಾಡಿದೆ?..

ಕಡೆದೂಂದು ಮಾತು, ಅರ್ಥ ಆಗತ್ತೆ ನಿಮ್ಮ ಅಭಿಮಾನ, ಆಘಾತ ಎಲ್ಲಾ… ಆದರೆ ವಿಷಯ ಪೂರ್ತಿಯಾಗಿ ತಿಳಿದುಕೊಳ್ಳದೆ ಆತುರಕ್ಕೆ ಪೋಸ್ಟ್ ಹಾಕಬೇಡಿ. ಸೆಪ್ಟಂಬರ್ 14 ಸಂಜೆ 6.10 ಕ್ಕೆ ರವಿ ಎಲ್ಲರನ್ನೂ ಬಿಟ್ಟು ಹೋಗಿದ್ದು. ಬೆಳಿಗ್ಗೆಯಿಂದ ಎಲ್ಲಾ ಕಡೆ ಹರಿದಾಡ್ತಿದ್ದ ಸುದ್ದಿ ಅವರ ಮನೆಯವರಿಗೆ ಇನ್ನಷ್ಟು ನೋವುಕೊಟ್ಟಿದೆ. ದಯವಿಟ್ಟು ಅತ್ಯಾಪ್ತರ ಹತ್ರ ಅಧಿಕೃತ ಮಾಡಿಕೊಂಡು ಪೋಸ್ಟ್ ಹಾಕಿ… ಪೋಸ್ಟ್ ನೋಡಿಕೊಂಡು ಮನೆಯವರಿಗೆ ಬರ್ತಾ ಇದ್ದ ಕರೆಗಳು ಅವರ ಆತ್ಮಸ್ಥೈರ್ಯವನ್ನ ಇನ್ನಷ್ಟು ಕುಗ್ಗಿಸ್ತಿತ್ತು.. ದಯವಿಟ್ಟು.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..