ಮನೆಯಲ್ಲೇ ಸುಲಭವಾಗಿ ಮಸಾಲ್ ದೋಸೆ, ಕೆಂಪು ಚಟ್ನಿ ಮಾಡುವ ಸುಲಭ ವಿಧಾನ..

ಮಸಾಲ ದೋಸೆ, ಖಾಲಿ ದೋಸೆ, ಪೇಪರ್ ದೋಸೆ, ಸೆಟ್ ದೋಸೆ, ರವೆ ದೋಸೆ ಹೀಗೆ ಹತ್ತಾರು ಥರಹದ ದೋಸೆಗಳು ತಿನ್ನಬೇಕೆಂದ ಕೂಡಲೇ ಹೋಟೆಲ್’ನಲ್ಲಿ ಸಿಗುತ್ತೆ. ಆದರೆ ಮನೆಯಲ್ಲಿ ರುಚಿಕರವಾದ ದೋಸೆ ಮಾಡಬೇಕಂದ್ರೆ ಒಂದು ದಿನ ಕಾಯಲೇ ಬೇಕು. ಉದ್ದಿನ ಬೇಳೆ, ಅಕ್ಕಿ ನೆನಸಿಟ್ಟು, ನಂತರ ರುಬ್ಬಿ ರಾತ್ರಿ ಇಡೀ ಉದುಗಲು ಬಿಡಬೇಕು.

ಯಾಕೆ ಇಷ್ಟೆಲ್ಲಾ ತಾಪತ್ರಯ, ದಿಢೀರ್ ಎಂದು ಮಾಡುವಂತಹಾ ದೋಸೆ ಕೂಡ ಇದೆ. ಈ ರವೆ ದೋಸೆ, ಬೇರೆ ದೋಸೆಗಳಂತೆ ಹಿಂದಿನ ದಿನವೇ ಮಿಕ್ಸರ್/ಗ್ರೈಂಡರ್’ಗೆ ಹಾಕುವ ಗೋಜಿಲ್ಲ. ಹಿಟ್ಟು ಹುಳಿ ಬರುವ ಅಗತ್ಯವೂ ಇಲ್ಲ. ದೋಸೆ ಮಾಡುವ 20 ನಿಮಿಷಗಳ ಮುಂಚೆ ಹಿಟ್ಟನ್ನು ಸಿದ್ಧಗೊಳಿಸಿದರಾಯ್ತು. ಚಟ್ನಿ ಅಥವಾ ಸಾಗು ಜೊತೆಗೆ ತಿನ್ನಲು ಬಲು ರುಚಿ.

ಬನ್ನಿ ನೋಡೋಣ ಗರಿ ಗರಿ ರವೆ ದೋಸೆಯನ್ನು ಹೇಗೆ ಮಾಡುವುದೆಂದು. ಬೇಕಾಗುವ ಪದಾರ್ಥಗಳು: 2 ಚಮಚ ಗೋಧಿ ಹಿಟ್ಟು, 1 ಕಪ್ ಮೀಡಿಯಂ ರವೆ, 1 ಕಪ್ ಮೊಸರು, ದೋಸೆಕಲ್ಲು,
ಎಣ್ಣೆ ಅಥವಾ ತುಪ್ಪ (ದೋಸೆ ಮಾಡುವಾಗ ಬಳಸಲು),
ಉಪ್ಪು ರುಚಿಗೆ ತಕ್ಕಷ್ಟು, ಬೇಕಿಂಗ್ ಸೋಡಾ.

ಕೆಂಪು ಚಟ್ನಿ: ಕಾಯಿ, ಹುರಿಗಡಲೆ, ಹುರಿದುಕೊಂಡ ಕಡಲೆ ಬೀಜ, ಬ್ಯಾಡಿಗೆ ಮೆಣಸಿನಕಾಯಿ, ಹುಣಸೆ ಹಣ್ಣು, ಉಪ್ಪು, ಶುಂಠಿ ಹಾಕಿ ರುಬ್ಬಿಕೊಂಡರೆ ಕೆಂಪು ಚಟ್ನಿ ರೆಡಿ.

ರವೆ ದೋಸೆ ಮಾಡುವ ವಿಧಾನ: ಮಿಕ್ಸಿ ಜಾರ್’ಗೆ ಗೋಧಿ ಹಿಟ್ಟು, ರವೆ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಯಲ್ಲಿ ಹಾಕಿ. ಮೊಸರು,ನೀರು, ಉಪ್ಪು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಚೆನ್ನಾಗಿ ಕಲಸಿ. 15 – 20 ನಿಮಿಷ ನೆನೆಯಲು ಬಿಡಿ. ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.

ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟಿಗೆ ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿ.  ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ. ನಂತರ ಉರಿಯನ್ನು ಕಡಿಮೆ ಮಾಡಿ, 5 – 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.