ಹೇಗಿದೆ ಗೊತ್ತಾ ಲವ್ ಮಾಕ್ಟೈಲ್ 2 ಸಿನಿಮಾ.. ಇಲ್ಲಿದೆ ನೋಡಿ..

ಎರಡು ವರ್ಷಗಳ ಹಿಂದೆ ತೆರೆಕಂಡು ಕನ್ನಡ ಸಿನಿಪ್ರಿಯರಿಗೆ ತುಂಬಾ ಇಷ್ಟವಾಗಿದ್ದ ಸಿನಿಮಾ ಲವ್ ಮಾಕ್ಟೇಲ್. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ಪ್ರೀತಿ ಇತ್ತು. ಭಾವನಾತ್ಮಕವಾಗಿ ಎಲ್ಲರೂ ಲವ್ ಮಾಕ್ಟೇಲ್ ಜೊತೆ ಕನೆಕ್ಟ್ ಆದರು. ಸಿನಿಮದಲ್ಲಿದ್ದ ಚೈಲ್ಡ್ ಹುಡ್ ಜರ್ನಿ, ಪ್ರೀತಿ, ನೋವು, ಹತಾಶೆ, ರೊಮ್ಯಾನ್ಸ್, ಭಾವನೆ, ಸಂಸಾರದ ಕ್ಯೂಟ್ ಜರ್ನಿ, ಕೊನೆಗೆ ಟ್ರಾಜಿಡಿ ಅದೆಲ್ಲವೂ ಸಿನಿಪ್ರಿಯರ ಮನಸ್ಸಿಗೆ ನಾಟಿತ್ತು. ಇದೀಗ ಎರಡು ವರ್ಷಗಳ ನಂತರ ಲವ್ ಮಾಕ್ಟೇಲ್ ಸಿನಿಮಾದ ಮುಂದುವರೆದ ಭಾಗವನ್ನು ನಟ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ನಿನ್ನೆಯಷ್ಟೇ ಸಿನಿಮಾ ತೆರೆಕಂಡಿದೆ. ಡಾರ್ಲಿಂಗ್ ಕೃಷ್ಣ ಅವರೇ ನಿರ್ದೇಶನ ಮಾಡಿರುವ ಈ ಸಿನಿಮಾ ಅವರ ಮತ್ತೊಂದು ಕನಸಿನ ಕೂಸು. ಲವ್ ಮಾಕ್ಟೇಲ್ ಹಾಗೆ ಈ ಸಿನಿಮಾದಲ್ಲಿ ಕೂಡ ಹಿಂದಿನ ಅಂಶಗಳು ಇದೆಯಾ? ಅದೇ ಮ್ಯಾಜಿಕ್ ಅನ್ನು ಕೃಷ್ಣ ಮತ್ತೆ ರೀಕ್ರಿಯೆಟ್ ಮಾಡಿದ್ದಾರಾ? ಈ ಸಿನಿಮಾದಲ್ಲಿ ನಿಧಿ ಇದ್ದಳಾ? ನಿಜಕ್ಕೂ ಸಿನಿಮಾ ಹೇಗಿದೆ.. ಮುಂದೆ ಓದಿ

ಕಳೆದುಹೋಗಿರುವ ಆದಿಯನ್ನು ಫ್ರೆಂಡ್ಸ್ ಹುಡುಕಾಟ ನಡೆಸುವುದರಿಂದಲೇ ಸಿನಿಮಾ ಆರಂಭ ಆಗುತ್ತದೆ. ನಿಧಿ ಹೋದ ನಂತರ ತನ್ನನ್ನು ತಾನೇ ಕಳೆದುಕೊಂಡಿದ್ದ ಆದಿ, ತನ್ನನ್ನು ತಾನು ಮತ್ತೆ ಪಡೆದು, ತನ್ನ ಜೀವನದ ಅಸ್ತಿತ್ವ ಕಂಡುಕೊಳ್ಳುವುದು ಈ ಸಿನಿಮಾಡ್ ಕಥೆಯಾಗಿದೆ. ಹಾಗೆಂದು ಇಲ್ಲಿ ಭಾವನಾತ್ಮಕ ಅಂಶಗಳೇ ಹೆಚ್ಚಾಗಿ ಇಲ್ಲ. ಹುಡುಕಾಟ ನಡೆಸುವ ಕಥೆಯನ್ನು ಹಾಸ್ಯವಾಗಿ ತೋರಿಸಿದ್ದಾರೆ ಕೃಷ್ಣ. ಮೊದಲ ಭಾಗದಲ್ಲಿ ನಿಧಿ ಹೋದ ನಂತರ ಆದಿ ಹೇಗಿದ್ದಾನೆ, ಎರಡು ವರ್ಷಗಳ ಕಾಲ ನಿಧಿ ನೆನಪಲ್ಲಿದ್ದ ಆದಿ, ಡಿಪ್ರೆಸ್ ಆಗಿದ್ದ ಆದಿಗೆ ಮತ್ತೊಂದು ಮದುವೆ ಮಾಡಬೇಕು ಎಂದು ಸ್ನೇಹಿತರು ಪ್ರಯತ್ನ ಪಡುತ್ತಾರೆ. ಹುಡುಗಿಯನ್ನು ಹುಡುಕುತ್ತಾರೆ.

ಆದಿಗೆ ಒಬ್ಬ ಹುಡುಗಿಯನ್ನು ಹುಡುಕುತ್ತಾ, ಈ ನಡುವೆ ಹಳೆಯ ಕಥೆಯಲ್ಲಿದ್ದ ಹುಡುಗಿಯರೆಲ್ಲಾ ಬಂದು ಹೋಗುತ್ತಾರೆ. ಜೊತೆಗೆ ಎಕ್ಸ್ ಗರ್ಲ್ ಫ್ರೆಂಡ್ ಜೋ ಜೊತೆ ಆದಿ ಮದುವೆಯಾಗಬಹುದು ಎನ್ನುವ ಹಾಗೆ ತೋರಿಸಿ ಜನರಿಗೆ ಸ್ವಲ್ಪ ತಲೆಕೆಡಿಸುವ ಹಾಗೆ ತೋರಿಸಲಾಗುತ್ತದೆ. ಮೊದಲಾರ್ಧದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಅದನ್ನೇ ತೋರಿಸಿಕೊಂಡು ಹೋಗಲಾಗಿದೆ. ಆದರೆ ಇಂಟರ್ವಲ್ ಸಮಯದಲ್ಲಿ ಮಹತ್ತರವಾದ ಟ್ವಿಸ್ಟ್ ನೀಡಲಾಗಿದೆ. ಸಿನಿಮಾ ದ್ವಿತೀಯಾರ್ಧದಲ್ಲಿ ಮೂಡಿಬಂದಿರುವ ಟ್ವಿಸ್ಟ್ ಗಳು ಎಲ್ಲರೂ ಎಣಿಸಿದ ಹಾಗೆಯೇ ಇದೆ. ಆದರೆ ಕಥೆಯನ್ನು ಭಾವನಾತ್ಮಕತೆಯ ಜೊತೆಗೆ ಹಾಸ್ಯದ ರೂಪದಲ್ಲೂ ತೋರಿಸಿದ್ದಾರೆ.

ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಯಾವ ಭಾವನೆಗಳನ್ನು ಕೂಡ ಒತ್ತಡ ಹಾಕಿ ತೋರಿಸಿಲ್ಲ, ಸರಳವಾಗಿ ಎಲ್ಲಾ ಭಾವನೆಗಳನ್ನು ತೋರಿಸಿದ್ದಾರೆ. ಸಿನಿಮಾದ ಕಥೆ ಹೇಗಿದೆ ಅಂದ್ರೆ ಪ್ರೀತಿ, ನೋವು, ಹತಾಶೆ, ಹಾಸ್ಯ ಇದೆಲ್ಲವೂ ವೀಕ್ಷಕರಿಗೆ ಅರ್ಥ ಆಗುವ ಹಾಗೆ ಸರಳವಾಗಿ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಅನಾವಶ್ಯಕ ಅನ್ನಿಸಿದ್ದ ಫೈಟ್ ಗಳು ಸಹ ಈ ಸಿನಿಮಾದಲ್ಲಿ ಇರಲಿಲ್ಲ. ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಸ್ಕ್ರೀನ್ ಸ್ಪೇಸ್ ನೀಡಿ ಕೆಲಸ ತೆಗೆದುಕೊಂಡಿದ್ದಾರೆ ಕೃಷ್ಣ. ಈ ಸಿನಿಮಾ ಹೀರೋ ಹೀರೋಯಿನ್ ಗೆ ಮಾತ್ರ ಆಗಿರದೆ, ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ.

ನಾಯಕನ ಸ್ನೇಹಿತರಾದ ವಿಜು, ಸುಶ್ಮಾ, ಹೀರೋಯಿನ್ ತಾತ, ಮ್ಯಾಚ್ ಮೇಕರ್ ಹುಡುಗಿ, ಪೊಲೀಸ್ ಪಾತ್ರ ಹೀಗೆ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಮತ್ತು ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ಹಾಗೆಯೇ ಕಥೆಯನ್ನು ಸೂಕ್ಷ್ಮವಾಗಿ ತೆಗೆದುಕೊಂಡು ಹೋಗಿದ್ದಾರೆ. ಆದಿ ಸ್ನೇಹಿತ ವಿಜಯ್ ಆಗಾಗ ಹೇಳುವ ಜೋಕ್ ಗಳಿಗೆ ನಗು ಬರದೆ ಇದ್ದರು ಕೂಡ ಸಿನಿಮಾ ಕೊನೆಯ ಹಂತದಲ್ಲಿದ್ದಾಗ ಆ ಜೋಕ್ ಇಂದಲೂ ಒಂದು ಟ್ವಿಸ್ಟ್ ನೀಡಿದ್ದಾರೆ. ಯಾವಾಗಲೂ ಅತಿಯಾಗಿ ಸಂತೋಷ ನೀಡುವ ರೇಣು ಪಾತ್ರ, ಅದಕ್ಕೆ ಕಾರಣ ಏನು ಎಂದು ತಿಳಿಸಿ, ಅದರಲ್ಲೂ ಒಂದು ಪಾಠ ಕಲಿಸಿದ್ದಾರೆ. ಸಿನಿಮಾದಲ್ಲಿ ಸಿನಿಮಾಟೋಗ್ರಾಫಿ ಕಣ್ಣಿಗೆ ಹಿತ ನೀಡುತ್ತದೆ. ಕರ್ನಾಟಕದ ಹಸಿರು ಭಾಗಗಳಲ್ಲಿ ಸಿನಿಮಾ ಚಿತ್ರಣ ಮಾಡಲಾಗಿದೆ. ಹಾಗೂ ಸಂಗೀತ ಸಹ ಮನಮುಟ್ಟುವ ಹಾಗಿದೆ.

ಹಾಡುಗಳು ಮತ್ತು ಕಥೆಯ ನಡುವೆ ಕೇಳಿಬರುವ ಬಿಟ್ ಗಳು ಮತ್ತು ಮ್ಯೂಸಿಕ್ ಮನಸ್ಸಿನಲ್ಲಿ ಭಾವುಕರಾಗುವ ಹಾಗೆ ಮಾಡುತ್ತದೆ. ಹಾಡುಗಳು ಮತ್ತೆ ಮತ್ತೆ ಕೇಳಬೇಕು ಎನ್ನಿಸುವ ಹಾಗಿವೆ. ಸಿನಿಮಾದ ಬ್ಯಾಗ್ರೌಂಡ್ ಸ್ಕೊರ್ ಭಾವನೆಗೆ ಇನ್ನು ಹೆಚ್ಚು ಒತ್ತು ಕೊಡುತ್ತದೆ. ಸಿನಿಮಾದ ಎಡಿಟಿಂಗ್ ಕೆಲಸ ಸಹ ಅಚ್ಚುಕಟ್ಟಾಗಿ ಮೂಡಿಬಂದಿದೆ. ಅಭಿನಯದ ವಿಷಯಕ್ಕೆ ಬರುವುದಾದರೆ, ಮೊದಲ ಭಾಗದಲ್ಲಿ ನಿಧಿ ಎಲ್ಲರಿಗಿಂತ ಹೆಚ್ಚು ಇಷ್ಟವಾಗುವ ಹಾಗೆ ಇದರಲ್ಲಿ ಸಿಹಿ ಪಾತ್ರ ತುಂಬಾ ಹತ್ತಿರವಾಗುತ್ತದೆ ,ನೋಡಲು ತುಂಬಾ ಮುದ್ದಾಗಿದ್ದು, ಅಭಿನಯವನ್ನು ಚೆನ್ನಾಗಿ ಮಾಡಿದ್ದಾರೆ ನಟಿ ರೇಚಲ್ ಡೇವಿಡ್. ಇವರ ಪಾತ್ರ ಹಾಗೂ ಮುಗ್ಧತೆ ಎಲ್ಲವೂ ಎಷ್ಟು ಇಷ್ಟವಾಗುತ್ತದೆ ಅಂದರೆ ಇನ್ನು ಕೆಲವು ಸಮಯ ಇವರಿಗೆ ಸ್ಕ್ರೀನ್ ಸ್ಪೇಸ್ ಕೊಡಬೇಕಿತ್ತು ಎಂದು ಅನ್ನಿಸುತ್ತದೆ. ಅಷ್ಟು ಚಂದವಾಗಿ ನಟನೆ ಮಾಡಿದ್ದಾರೆ ರೇಚಲ್. ಮುಂದಿನ ದಿನಗಳಲ್ಲಿ ಇವರಿಗೆ ಸ್ಯಾಂಡಲ್ ವುಡ್ ನಲ್ಲಿ ಹಚ್ಚಿನ ಸಿನಿಮಾ ಅವಕಾಶಗಳು ಸಿಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಇನ್ನುಳಿದ ಹಾಗೆ ಜೋ, ರಚನಾ, ಜಂಕಿ, ವಿಜು ಸುಶ್ಮಾ ಎಲ್ಲರ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ಅಭಿನಯ ಮಾಡಿದ್ದಾರೆ. ವಿಜು ಸುಷ್ಮಾ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ. ತಾರಾಬಳಗ ಇಲ್ಲಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ ಎನ್ನಬಹುದು. ಇನ್ನು ಸಿನಿಮಾದಲ್ಲಿ ನೆಗಟಿವ್ ಎಂದು ಹೇಳಲು ಹೆಚ್ಚಾಗಿ ಏನು ಇಲ್ಲ. ಜೋ ಮತ್ತು ಆದಿ ನಡುವೆ ನಡೆಯುವ ಒಂದು ದೃಶ್ಯಕ್ಕೆ ಸ್ಪಷ್ಟನೆ ಸಿಗುವುದಿಲ್ಲ, ಹಾಗೆಯೇ ಆದಿ ನಿಧಿ ನಡುವೆ ನಡೆಯುವ ಸಂಭಾಷಣೆ ಜೊತೆಯಲ್ಲಿರುವವರಿಗೆ ಕೇಳಿಸುವುದಿಲ್ಲವೇ ಅನ್ನಿಸಬಹುದು. ಆದರೆ ಸಿನಿಮಾ ಭಾವನಾತ್ಮಕವಾಗಿ ಕನೆಕ್ಟ್ ಆದಾಗ, ಈ ಲಾಜಿಕ್ ಗಳು ತಲೆಗೆ ಬರುವುದಿಲ್ಲ. ಒಟ್ಟಾರೆಯಾಗಿ ಎಲ್ಲರೂ ಕೂತು ಸಂತೋಷವಾಗಿ ನೋಡಬಹುದಾದ ಸಿನಿಮಾ ಲವ್ ಮಾಕ್ಟೇಲ್ 2, ಎಲ್ಲರೂ ತಪ್ಪದೆ ಸಿನಿಮಾವನ್ನು ಥಿಯೇಟರ್ ನಲ್ಲೇ ನೋಡಿ..