ನಿಂಬೆ ಹಣ್ಣಿನ ಸೋಪ್ ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಿ‌‌‌..

ಈಗ ಸೇವಿಸುವ ಆಹಾರದಿಂದ ಹಿಡಿದು ಎಲ್ಲವೂ ಕಲಬೆರಿಕೆ ಆಗಿ ಹೋಗಿದೆ. ಹೀಗಿರುವಾಗ ತ್ವಚೆಯ ರಕ್ಷಣೆ ಹಾಗೂ ಸ್ವಚ್ಛತೆಗಾಗಿ ಬಳಸುವ ಸಾಬೂನಿನ ಬಗ್ಗೆ ಹೇಳುವಂತೆಯೇ ಇಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಾಬೂನುಗಳು ಸಂಪೂರ್ಣವಾಗಿ ರಾಸಾಯನಿಕಗಳಿಂದ ಕೂಡಿರುತ್ತವೆ. ಇವುಗಳನ್ನು ಬಳಸುವುದರಿಂದ ತ್ವಚೆಯ ಆರೋಗ್ಯ ಚೆನ್ನಾಗಿರುವುದಕ್ಕಿಂತ, ಹಾಳಾಗುವುದೇ ಹೆಚ್ಚು. ಆದರೆ ಈಗೀಗ ರಾಸಾಯನಿಕ ಮುಕ್ತ ಸಾಬುನುಗಳು ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಅದರಲ್ಲೂ ಮನೆಯಲ್ಲೇ ಹಣ್ಣು-ತರಕಾರಿಗಳನ್ನು ಬಳಸಿ ಆಯಾ ಕಾಲಕ್ಕೆ ತಕ್ಕಂತ ಸಾಬೂನುಗಳನ್ನು ತಯಾರಿಸಲಾಗುತ್ತದೆ. ಅಧಿಕ ಹಣ ನೀಡಿ ಸಾಬೂನನ್ನು ಅಂಗಡಿಗಳಲ್ಲಿ ಕೊಂಡುಕೊಳ್ಳುವ ಬದಲು ನಾವೇ ಮನೆಯಲ್ಲಿ ತಯಾರಿಸಿ ಉಪಯೋಗಿಸಿದರೆ, ಹಣದ ಉಳಿತಾಯವೂ ಆಗುತ್ತದೆ. ಹಲವು ರಾಸಾಯನಿಕಗಳನ್ನು ಉಪಯೋಗಿಸಿ ಮಾಡಿರಬಹುದಾದ ಸಾಬೂನುಗಳಿಂದ ದೂರವಿದ್ದು, ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಬೇವು, ನಿಂಬೆ, ಕಿತ್ತಳೆ, ಟೊಮೇಟೋ ಬಳಸಿ ಮಾಡುವ ಸೋಪ್’ಗಳಿಗೆ ಈಗ ಬೇಡಿಕೆಯೂ ಹೆಚ್ಚಾಗಿದೆ.

ನಿಂಬೆ ಹಣ್ಣುಗಳನ್ನು ಎಲ್ಲರೂ ಯಥೇಚ್ಛವಾಗಿ ಬಳಸುತ್ತಾರೆ. ಇದರ ಸಿಪ್ಪೆಯನ್ನು ಬಿಸಾಕೋ ಬದಲು ಹಲವು ರೀತಿಯಲ್ಲಿ ಬಳಸಬಹುದು. ಇದರ  ಸಿಪ್ಪೆಯಲ್ಲಿ ಲಿಮೊನಿಂ, ಬೈ ಪ್ಲಾವಿನೋಯ್ಡ್, ವಿಟಾಮಿನ್ ಸಿ ಮತ್ತು ಪೊಟ್ಯಾಶಿಯಂ ಮೊದಲಾದ ಫೈಟೋಕೆಮಿಕಲ್ಸ್ ಅಂಶಗಳಿವೆ. ಇವು ಹಣ್ಣುಗಳಿಗಿಂತ ಹೆಚ್ಚಾಗಿ ನಿಮ್ಮ ಅರೋಗ್ಯ ಕಾಪಾಡುತ್ತದೆ. ಈ ಸಿಪ್ಪೆಯಲ್ಲಿರುವ ಆಂಟಿ ಇನ್‌ಫ್ಲೇಮಟರಿ ಗುಣ ಮತ್ತು ಪೊಟ್ಯಾಶಿಯಂ ಬ್ಲಡ್ ಪ್ರೆಶರ್ ಮ್ಯಾನೇಜ್ ಮಾಡುತ್ತದೆ. ಇದರಲ್ಲಿರುವ ಪಾಲಿಮೆಥಾಕ್ಸಿಲೇಟ್ ಫ್ಲೇವೋನ್ಸ್ ಡಯಾಬಿಟೀಸ್ ಕಂಟ್ರೋಲ್ ಮಾಡುತ್ತದೆ. ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಡಯಟಿನಲ್ಲಿ ಬಳಸಿ. ಇದರಿಂದ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುತ್ತದೆ. ಹಾಗಾದರೆ ನಿಂಬೆ ಹಣ್ಣು ಬಳಸಿ ಹೇಗೆ ಸೋಪ್ ತಯಾರಿಸಬಹುದು ನೋಡೋಣ ಬನ್ನಿ.. ಬೇಕಾಗುವ ಸಾಮಗ್ರಿಗಳು: ಗ್ಲಿಸರಿನ್ ಸೋಪ್, ನಿಂಬೆ ಪೌಡರ್, ನಿಂಬೆ ಎಣ್ಣೆ, ಫುಡ್ ಕಲರ್. ತಯಾರಿಸುವ ವಿಧಾನ: ಬೌಲ್’ಗೆ ಗ್ಲಿಸರಿನ್ ಸೋಪ್ ಚೂರುಗಳನ್ನು ಹಾಕಿ ಕರಗಿಸಿಕೊಳ್ಳಿ. ಸೋಪು ಕರಗಿದ ನಂತರ ಇದಕ್ಕೆ ನಿಂಬೆ ಪೌಡರ್, ನಿಂಬೆ ಎಣ್ಣೆ, ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮಗೆ ಬೇಕಾದ ಆಕಾರಗಳ ಪ್ಲಾಸ್ಟಿಕ್ ಕಪ್’ಗಳಿಗೆ ಬಿಟ್ಟು ಗಟ್ಟಿಯಾದ ಮೇಲೆ ಚಾಕು ಸಹಾಯದಿಂದ ಕಪ್’ನಿಂದ ಬೇರ್ಪಡಿಸಿ. ಈಗ ನಿಂಬೆ ಸೋಪ್ ಬೇಸ್ ಸಿದ್ಧವಾಗಿದೆ.