ಬಾಯಲ್ಲಿ ಇಟ್ಟರೆ ಕರಗುವ ಹಾಗೆ ಕಜ್ಜಾಯ ಮಾಡುವ ಸುಲಭ ವಿಧಾನ..

ಕಜ್ಜಾಯ ಅಂದ್ರೆ ಸಾಕು ಎಲ್ಲರ ಬಾಯಲ್ಲಿಯೂ ನೀರೂರುತ್ತೆ. ಆದರೆ ಅದನ್ನು ಮಾಡಲು ಸಾಕಷ್ಟು ಜನರಿಗೆ ಸುಲಭವಲ್ಲ. ಆದರೆ ಅತ್ಯಂತ ಸುಲಭವಾಗಿ ರುಚಿಕರ ಕಜ್ಜಾಯವನ್ನು ತಯಾರಿಸುವುದು ಹೇಗೆ ಎಂಬುವ ಸುಲಭ ವಿಧಾನ ಇಲ್ಲಿ ಹೇಳಲಾಗಿದೆ ನೋಡಿ‌‌.. ನಿಮಗೂ ಬೇಕು ಎಂದಾಗ ಮನೆಯಲ್ಲಿಯೇ ತಯಾರಿಸಿಕೊಂಡು ಸವಿಯಿರಿ..

ಕಜ್ಜಾಯ ಮಾಡಲು ಬೇಕಾಗಿರುವ ಸಾಮಗ್ರಿಗಳು.. ಎಳ್ಳು – ೨ ಟೀ ಚಮಚ.. ಗಸಗಸೆ – ೨ ಟೀ ಚಮಚ.. ಏಲಕ್ಕಿ – ೪ -೫.. ಅಕ್ಕಿ – ಒಂದು ಲೋಟ..‌ಬೆಲ್ಲ – ಮುಕ್ಕಾಲು ಕಪ್.. ತುಪ್ಪ  ಅಥವಾ ಎಣ್ಣೆ – ಒಂದು ಚಮಚ..

ಮಾಡುವ ವಿಧಾನ: ಮೊದಲು ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದುವರೆ ದಿನ ನೆನೆಸಿಡಿ. ಆದರೆ ನೀರನ್ನು ದಿನದಲ್ಲಿ ೨ ಬಾರಿ ಬದಲಾಯಿಸಿ ಇಲ್ಲವಾದಲ್ಲಿ ವಾಸನೆ ಬರುತ್ತದೆ. ನಂತರ ನೆನೆಸಿದ ಅಕ್ಕಿಯನ್ನು ನೀರಿನಿಂದ ತೆಗೆದು ಒಣಗಲು ಬಿಡಿ. ಅಕ್ಕಿ ಸರಿಯಾಗಿ ಒಣಗಿದ ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪವೂ ನೀರು ತಾಕದಂತೆ ನೋಡಿಕೊಳ್ಳಬೇಕು. ರುಬ್ಬಿದ ಮಿಶ್ರಣ ಅತ್ಯಂತ ನುಣುಪಾಗಿರಬೇಕು.

ಒಂದು ಲೋಟ ಅಕ್ಕಿಗೆ ಮುಕ್ಕಾಲು ಲೋಟ ಬೆಲ್ಲ ವನ್ನು ಬಳಸಬೇಕು. ಬೆಲ್ಲವನ್ನು ಪಾಕ ತರಿಸಿಕೊಳ್ಳಲು ಸ್ವಲ್ಪ ನೀರು ಬೆರೆಸಿ ಬೆಲ್ಲವನ್ನು ಕುದಿಸಿ. ಬೆಲ್ಲ ಸರಿಯಾಗಿ ಪಾಕ ಆಗುವವರೆಗೂ ಕುದಿಸಿ. (ನೀರಿನಲ್ಲಿ ಕುದಿದ ಬೆಲ್ಲವನ್ನು ಹಾಕಿಕೊಂಡರೆ ಅದು ಕೈಗೆ ಹಿಡಿಯದಂತೆ ಇದ್ದರೆ ಪಾಕ ಆಗಿದೆ ಎಂದು ಅರ್ಥ) ಏಲಕ್ಕಿ ಪುಡಿ, ಎಳ್ಳು ಹಾಗೂ ಗಸಗಸೆಯನ್ನು ಹುರಿದುಕೊಳ್ಳಿ.

ಪಾಕ ಬಂದ ನಂತರ ಬೆಲ್ಲದ ಪಾಕಕ್ಕೆ ಅಕ್ಕಿಹಿಟ್ಟು ಹಾಗೂ ಏಲಕ್ಕಿ, ಗಸಗಸೆ, ಎಳ್ಳನ್ನು ಸೇರಿಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರಣಮಾಡಿ. ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. ಇದನ್ನು ರಾತ್ರಿ ಪೂರ್ತಿ ಹಾಗೆಯೇ ಬಿಡಿ.

ಮರುದಿನ ಕಜ್ಜಾಯ ಮಿಶ್ರಣವು ಕಜ್ಜಾಯ ಮಾಡಲು ಸಿದ್ಧವಾಗಿರುತ್ತದೆ. ಈ ಮಿಶ್ರಣದಿಂದ ಒಂದೊಂದೆ ಉಂಡೆಯನ್ನು ತಯಾರಿಸಿ ಒಂದು ಸರಿಯಾದ ಪ್ಲಾಸ್ಟಿಕ್ ಕವರ್ ಮೇಲೇ ಸಣ್ಣದಾಗಿ ತಟ್ಟಿ ಮಧ್ಯದಲ್ಲಿ ಒಂದು ರಂಧ್ರವನ್ನು ಮಾಡಬೇಕು. ನಂತರ ಒಂದು ಚೆನ್ನಾಗಿ ಬಿಸಿಯಾದ ಎಣ್ಣೆ ಪಾತ್ರೆಗೆ ತಟ್ಟಿದ ಕಜ್ಜಾಯವನ್ನು ಹಾಕಿ ಬೇಯಿಸಿ. ಇದೀಗ ರುಚಿಕರವಾದ ಕಜ್ಜಾಯ ಸವಿಯಲು ಸಿದ್ಧ..