ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ನಟಿ ದೀಪಾ ಭಾಸ್ಕರ್ ಏನಾದರು ಗೊತ್ತಾ?

ಕಿರುತೆರೆ ಲೋಕ ಈಗ ಚಿತ್ರರಂಗದ ಹಾಗೆಯೇ ಆಗಿದೆ.. ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಬಂದು ಹೋಗುವ ಹಾಗೆ ಕಿರುತೆರೆಗು ಬಹಳಷ್ಟು ಹೊಸ ಕಲಾವಿದರು, ತೆರೆಮರೆಯಲ್ಲಿದ್ದ ಕಲಾವಿದರು, ಹಿಂದಿನಿಂದಲೂ ಇರುವ ಕಲಾವಿದರು ಆಗಾಗ ಬಂದು ಹೋಗುವುದುಂಟು. ಈ ರೀತಿ ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಂಡು, ಜನರಿಗೆ ಹತ್ತಿರವಾದ ಕಲಾವಿದೆಯರಲ್ಲಿ ಒಬ್ಬರು ಸುಬ್ಬಲಕ್ಷ್ಮೀ ಸಂಸಾರ ಧಾರವಾಹಿ ಖ್ಯಾತಿಯ ದೀಪಾ ಭಾಸ್ಕರ್. ಸುಬ್ಬಲಕ್ಷ್ಮಿ ಪಾತ್ರದ ಮೂಲಕ ಮನೆಮಾತಾಗಿದ್ದ ದೀಪಾ ಭಾಸ್ಕರ್ ಅವರು ಬಹುಮುಖ ಪ್ರತಿಭೆ. ಇವರು ನಟಿ ಎನ್ನುವುದರ ಜೊತೆಗೆ ಕಂಠದಾನ ಕಲಾವಿದೆ ಸಹ ಹೌದು. ಸುಬ್ಬಲಕ್ಷ್ಮೀ ಸಂಸಾರ ಧಾರವಾಹಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ಇವರು ಏನಾದರು? ಈಗ ಏನು ಮಾಡುತ್ತಿದ್ದಾರೆ ಗೊತ್ತಾ..

ನಟಿ ದೀಪಾ ಭಾಸ್ಕರ್ ಬಹಳ ಚಿಕ್ಕ ವಯಸ್ಸಿನಿಂದಲೇ ಬಣ್ಣದ ಲೋಕದ ಜೊತೆಗೆ ನಂಟು ಬೆಳೆಸಿಕೊಂಡಿರುವ ಹುಡುಗಿ. ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, ಶ್ರೀರಸ್ತು ಶುಭಮಸ್ತು, ಮಹೇಂದ್ರ ವರ್ಮಾ, ಯಾರೇ ನೀ ಅಭಿಮಾನಿ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದಾರೆ. ಆದರೆ ಇವರು ಹೆಚ್ಚು ಗುರುತಿಸಿಕೊಂಡಿದ್ದು ಕಂಠದಾನ ಕಲಾವಿದೆಯಾಗಿ. ದೀಪಾ ಭಾಸ್ಕರ್ ಅವರು ಖ್ಯಾತ ನಟಿ ರಮ್ಯಾ, ಪಾರ್ವತಿ ಮೆನನ್, ಸೋನು ಗೌಡ, ಮೀರಾ ಜಾಸ್ಮಿನ್ ಸೇರಿದಂತೆ ಕನ್ನಡದಲ್ಲಿ ಸಿನಿಮಾ ಮಾಡಿರುವ ಬಹುತೇಕ ನಟಿಯರಿಗೆ ಸಿನಿಮಾಗಳಲ್ಲಿ ಧ್ವನಿ ನೀಡಿ, ಅವರ ಅಭಿನಯಕ್ಕೆ ಜೀವ ತುಂಬಿದ್ದಾರೆ.

ನಾಯಕಿಯರ ನಿಜವಾದ ಧ್ವನಿ ಇದೇ ಇರಬಹುದಾ ಎನ್ನುವಷ್ಟು ಅಚ್ಚುಕಟ್ಟಾಗಿ ಇರುತ್ತದೆ ದೀಪಾ ಅವರ ಡಬ್ಬಿಂಗ್. 500ಕ್ಕಿಂತ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಮಾಡಿ, ಡಬ್ಬಿಂಗ್ ನಲ್ಲಿ ಇವರು ರಾಜ್ಯಪ್ರಶಸ್ತಿಯನ್ನು ಸಹ ಪಡೆದಿದ್ದಾರೆ ಎನ್ನುವುದು ಅನೇಕ ಜನರಿಗೆ ಗೊತ್ತಿಲ್ಲ. ಬಾಲನಟಿಯಾಗಿ ಮಾತ್ರವಲ್ಲದೆ, ದೊಡ್ಡವರಾದ ಮೇಲು ಸಹ ಮೈ ಆಟೋಗ್ರಾಫ್, ಶಾಂತಿ ನಿವಾಸ ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ದೀಪಾ, ದೀಪಾ ಅವರ ಅಭಿನಯ ಸಹ ಅಷ್ಟೇ ಅಚ್ಚುಕಟ್ಟು. ಸಿನಿಮಾ, ಡಬ್ಬಿಂಗ್ ಮಾತ್ರವಲ್ಲದೆ, ಕಿರುತೆರೆಯಲ್ಲಿ ಸಹ ಮಿಂಚಿದ್ದಾರೆ, ಪಾಪಾ ಪಾಂಡು, ಮಳೆಬಿಲ್ಲು, ಮದರಂಗಿ, ದಿಬ್ಬಣ, ಸುಬ್ಬಲಕ್ಷ್ಮಿ ಸಂಸಾರ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ಸಹ ನಟಿಸಿದ್ದಾರೆ.

ಸುಬ್ಬಲಕ್ಷ್ಮೀ ಸಂಸಾರ ಬಳಿಕ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದ ದೀಪಾ ಭಾಸ್ಕರ್ ಅವರು, ಇದೀಗ ನೃತ್ಯಗಾರ್ತಿಯಾಗಿ ಸಾಧನೆ ಮಾಡುವ ಜರ್ನಿಯಲ್ಲಿದ್ದಾರೆ. ಬಹಳ ವರ್ಷಗಳಿಂದ ಕಥಕ್ ನೃತ್ಯಶೈಲಿಯನ್ನು ಕಲಿಯುತ್ತಿರುವ ದೀಪಾ ಭಾಸ್ಕರ್ ಅವರು, ಇದೀಗ ಬೆಂಗಳೂರಿನಲ್ಲಿ ಕಥಕ್ ನೃತ್ಯ ಪ್ರದರ್ಶನ ನೀಡಿದ್ದಾರೆ. ತಮ್ಮ ಡ್ಯಾನ್ಸ್ ಜರ್ನಿ ಕುರಿತು ಮಾನಾಡಿರುವ ದೀಪಾ ಅವರು ಹೇಳಿದ್ದು ಹೀಗೆ.. “ಬಾಲ್ಯದಿಂದಲೂ ನಾನು ನಟನೆಯಲ್ಲಿ ತೊಡಗಿಸಿಕೊಂಡಿದ್ದೆ. ನಟನೆಯ ಜೊತೆಗೆ ಹಾಡು ನೃತ್ಯದಲ್ಲಿ ನಿರತವಾಗಿದ್ದರೆ, ಪರ್ಫೆಕ್ಟ್ ಕಲಾವಿದರಾಗುತ್ತಾರೆ ಎನ್ನುವುದು ಅಭಿನಯ ತರಂಗದಲ್ಲಿ ಕಲಿಯುವಾಗ ನನಗೆ ಗೊತ್ತಾಯಿತು. ನಿರುಪಮಾ ರಾಜೇಂದ್ರ ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡಿ, ನಾನು ಅವರ ದೊಡ್ಡ ಅಭಿಮಾನಿಯಾದೆ.

ಆ ನೃತ್ಯ ಪ್ರದರ್ಶನ ನೋಡಿದಾಗಿನಿಂದ ನನಗೂ ಕಥಕ್ ಕಲಿಯಬೇಕು ಎಂದು ಆಸಕ್ತಿ ಮೂಡಿತು. ಹಾಗಾಗಿ ನಿರುಪಮಾ ಅವರ ಬಳಿಯೇ ಕಥಕ್ ಕಲಿಯಲು ಶುರು ಮಾಡಿದೆ. ಹತ್ತರಿಂದ ಹನ್ನೊಂದು ವರ್ಷಗಳ ಕಾಲ ಕಥಕ್ ಅಭ್ಯಾಸ ಮಾಡಿದ್ದೇನೆ. ನನಗೆ ಕಥಕ್ ಬರುತ್ತಿದ್ದ ಕಾರಣ ಶಾಂತಿ ನಿವಾಸ ಸಿನಿಮಾದಲ್ಲಿ ಸುದೀಪ್ ಅವರು ನನಗೆ ಒಂದು ಪಾತ್ರ ಕೊಟ್ಟಿದ್ದರು. ಆ ಸಿನಿಮಾದಲ್ಲಿ ಕಥಕ್ ನೃತ್ಯಶೈಲಿ ಬರುವ ಒಂದು ಹಾಡನ್ನು ಸಹ ಮಾಡಿದ್ದರು ಸುದೀಪ್ ಅವರು. ನನ್ನ ಆರೋಗ್ಯದಲ್ಲಿ ತೊಂದರೆಯಾಗಿದ್ದ ಕಾರಣ ಕೆಲವು ವರ್ಷಗಳ ಕಾಲ ಕಥಕ್ ನೃತ್ಯ ಅಭ್ಯಾಸ ಮಾಡಲು, ಮತ್ತು ಪ್ರದರ್ಶನ ನೀಡಲು ಆಗಿರಲಿಲ್ಲ. ಎಲ್ಲದರಿಂದಲೂ ಒಂದು ಬ್ರೇಕ್ ಪಡೆದಿದ್ದೆ.

ಲಾಕ್ ಡೌನ್ ಸಮಯದಲ್ಲಿ ಶರತ್ ಪ್ರಭಾತ್ ಅವರ ಬಳಿ ಹೋಗಿ ಮತ್ತೊಂದು ಸಾರಿ ನೃತ್ಯಾಭ್ಯಾಸ ಮಾಡಿದೆ. ಆ ಕಲೆಯನ್ನು ಈಗ ವೀಕ್ಷಕರ ಎದುರು ಪ್ರದರ್ಶನ ಮಾಡುವ ಸಮಯ ಬಂದಿದೆ. ನಟನೆಯು ಎಷ್ಟು ಸೂಕ್ಷ್ಮವಾಗಿರಬೇಕು ಎನ್ನುವುದನ್ನು ನನಗೆ ಕಲಿಸಿಕೊಟ್ಟಿರುವುದು ನೃತ್ಯ. ಹಲವಾರು ವರ್ಕ್ ಶಾಪ್ ಗಳಲ್ಲಿ ಕಲಿಯಬೇಕಾದಂತಹ ಅನೇಕ ವಿಷಯಗಳನ್ನು ನಾನು ನೃತ್ಯದ ಮೂಲಕ ಕಲಿತಿದ್ದೇನೆ..” ಎನ್ನುತ್ತಾರೆ ದೀಪಾ ಭಾಸ್ಕರ್. ವೈಯಕ್ತಿಕ ಜೀವನದಲ್ಲಿ ಇವರಿಗೆ ಮದುವೆಯಾಗಿ, ಮಗು ಸಹ ಇದ್ದು, ಸಿನಿಮಾಗಳಲ್ಲಿ ಕಂಠದಾನ, ಧಾರವಾಹಿ, ನಟನೆ ಎಲ್ಲದರ ನಡುವೆ ನೃತ್ಯದ ಮೇಲು ಆಸಕ್ತಿ ಹೊಂದಿರುವ ದೀಪಾ ಅವರು ಈಗ ನೃತ್ಯ ಪ್ರದರ್ಶನ ನೀಡುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ.