ಸೆಟ್ ದೋಸೆ ಹಾಗೂ ಪೂರಿಗೆ ರುಚಿ ರುಚಿಯಾದ ಹೊಟೆಲ್ ಶೈಲಿಯ ಸಾಗು ಮಾಡುವ ಸುಲಭಾ ವಿಧಾನ..

ಸಾಮಾನ್ಯವಾಗಿ ಸೆಟ್ ದೋಸೆಯಲ್ಲಿ ಮಸಾಲೆ ಇಲ್ಲದಿರುವುದರಿಂದ ಕೊಂಚ ಅಗ್ಗವಾಗಿದ್ದು ಬಡವರ ಆದ್ಯತೆಯ ತಿಂಡಿಯೂ ಆಗಿದೆ. ಅಲ್ಲದೇ ಇದರಲ್ಲಿ ಮೂರು ದೋಸೆಗಳನ್ನು ನೀಡುವುದರಿಂದ ಒಂದು ಹೊತ್ತಿನ ಊಟಕ್ಕೆ ಸಮನಾದ ಆಹಾರ ಲಭ್ಯವಾಗುತ್ತದೆ. ಮಸಾಲೆ ದೋಸೆಗಿಂತಲೂ ಸೆಟ್ ದೋಸೆ ಚಿಕ್ಕದಾಗಿದ್ದರೂ ಈ ದೋಸೆ ದಪ್ಪನೆಯ ಸ್ಪಂಜಿನಂತಿರುವುದು ವಿಶಿಷ್ಟ ಸ್ವಾದ ಮತ್ತು ಅನುಭವ ನೀಡುತ್ತದೆ. ಇನ್ನು ಪೂರಿಯೂ ಅಷ್ಟೇ ದೊಡ್ಡ ದೊಡ್ಡ 2-3 ಪೂರಿಯನ್ನು ನೀಡುವುದರಿಂದ ಹೊಟ್ಟೆ ತುಂಬಾ ತಿಂದಂತಾಗುತ್ತದೆ. ಬಿಸಿ ಬಿಸಿಯಾಗಿ ಮೃದುವಾದ ಪೂರಿ ಹಲವರ ನೆಚ್ಚಿನ ಬ್ರೇಕ್’ಫಾಸ್ಟ್ ಕೂಡ. ಇದೆರಡೂ ತಿಂಡಿಗೆ ತರಕಾರಿಯ ಸಾಗು, ಕಡ್ಲೆಕಾಳಿನ ಗಸಿ, ವಿವಿಧ ಚಟ್ನಿ ಮೊದಲಾದವುಗಳ ಜೊತೆಗೆ ಉತ್ತಮ ರುಚಿ ನೀಡುತ್ತದೆ. ಸೆಟ್ ದೋಸೆ ಹಾಗೂ ಪೂರಿಗೆ ತರಕಾರಿ ಸಾಗು ಮಾಡಿದರೆ ಸಖತ್ ಆಗಿರುತ್ತೆ. ವಿಧವಿಧ ತರಕಾರಿಗಳನ್ನು ಬಳಸಿ, ಮಸಾಲೆ ಬೆರೆಸಿ ಮಾಡುವ ಈ ವೆಜಿಟೆಬಲ್ ಸಾಗು ಎಲ್ಲರಿಗೂ ಇಷ್ಟವಾಗುತ್ತೆ. ರುಚಿಯೊಂದಿಗೆ ಪೋಷಕಾಂಶವನ್ನೂ ಒದಗಿಸುವ ಈ ವೆಜಿಟೆಬಲ್ ಸಾಗುವನ್ನು ಹೋಟೆಲ್ ಸ್ಟೈಲ್’ನಲ್ಲಿ ಸುಲಭವಾಗಿ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: 1 ದೊಡ್ಡ ಆಲೂಗಡ್ಡೆ, 2 ಕ್ಯಾರೆಟ್, ಅರ್ಧ ಕಪ್ ಬೀನ್ಸ್, 1 ಕಪ್ ಹಸಿ ಬಟಾಣಿ, ಅರ್ಧ ಎಲೆಕೋಸು, 3-4 ಹಸಿರು ಮೆಣಸಿನಕಾಯಿ, 2 ಚಮಚ ಹುರಿಗಡಲೆ, ½ ಕಪ್ ತೆಂಗಿನ ತುರಿ, 4 ಲವಂಗ, 1 ಚೆಕ್ಕೆ, ಉಪ್ಪು, 1 ಟೊಮೆಟೊ, 1 ಈರುಳ್ಳಿ, ಕೊತ್ತಂಬರಿ ಮತ್ತು ಪುದೀನಾ, ಪಲಾವ್ ಎಲೆ, ಕರಿಬೇವು, ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಧನ್ಯಾ ಪುಡಿ, ಗರಂ ಮಸಾಲ, ಎಣ್ಣೆ.

ತರಕಾರಿ ಸಾಗು ಮಾಡುವ ವಿಧಾನ: ಮೊದಲು ಮಸಾಲೆಗೆಂದು ಒಂದು ಮಿಕ್ಸಿ ಜಾರ್’ಗೆ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಪುದೀನಾ, ಬೆಳ್ಳುಳ್ಳಿ, ಶುಂಠಿ, ಜೀರಿಗೆ, 2 ಚಮಚ ಹುರಿಗಡಲೆ, ½ ಕಪ್ ತೆಂಗಿನ ತುರಿ ಹಾಕಿ ಎಲ್ಲ ಸಾಮಗ್ರಿಗಳನ್ನು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು. ಒಂದು ಕುಕ್ಕರ್’ಗೆ ಎಣ್ಣೆ, ಕರಿಬೇವು, 4 ಲವಂಗ, 1 ಚೆಕ್ಕೆ, ಪಲಾವ್ ಎಲೆ ಹಾಕಿ ಹುರಿದುಕೊಳ್ಳಿ. ನಂತರ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ. ಈಗ ಟೊಮೆಟೊ ಹಾಕಿ ಚೆನ್ನಾಗಿ ಹುರಿದುಕೊಂಡು ರುಬ್ಬಿದ ಮಸಾಲೆ ಬೆರೆಸಿ ಕುದಿಯುವವರೆಗು ತಿರುಗಿಸುತ್ತಿರಬೇಕು. ನಂತರ ಕತ್ತರಿಸಿದ ತರಕಾರಿಗಳನ್ನು ಕುಕ್ಕರಿನಲ್ಲಿ ಹಾಕಿ ಉಪ್ಪು, ನೀರು ಸೇರಿಸಿ ಬೇಯಿಸಿಕೊಳ್ಳಬೇಕು.

ಈಗ ಟೇಸ್ಟಿ ತರಕಾರಿ ಸಾಗು ಬೇಗನೆ ಸಿದ್ಧಗೊಂಡಿರುತ್ತೆ. ಪೂರಿ, ಚಪಾತಿ, ಇಡ್ಲಿ, ದೋಸೆ ಯಾವುದಕ್ಕಾದರೂ ಸರಿ, ಇದು ಸಖತ್ ಕಾಂಬಿನೇಶನ್. ಬಿಸಿ ಅನ್ನದ ಜೊತೆಗೂ ಇದನ್ನು ಬೆರೆಸಿ ತಿಂದರೆ ರುಚಿಯಾಗಿರುತ್ತೆ.