ಮೇಘನಾ ಅವರು ಬರೆದ ಪತ್ರಕ್ಕೆ ಚಿರುವಿನ ಉತ್ತರ ಇದಾಗಿರಬಹುದು.. ಊಹೆಯಾದರೂ.. ಬರೆಯಲೇ ಬೇಕೆನಿಸಿ ಬರೆದಿರುವೆ.. ಸಾಧ್ಯವಾದರೆ ಮೇಘನಾರಿಗೆ ತಲುಪಲಿ..

ಸಾಮಾನ್ಯವಾಗಿ ಸಾವುಗಳನ್ನು ಕಂಡಾಗ ಎಲ್ಲರಿಗೂ ನೋವಾಗುತ್ತದೆ.. ಮರುಗುತ್ತೇವೆ.. ಆದರೆ ಅದ್ಯಾಕೋ ನನಗೆ ಮಾತ್ರವಲ್ಲ ಬಹುತೇಕರಿಗೆ ಸಂಬಂಧ ಇಲ್ಲವಾದರೂ ಅತ್ಯಂತ ಕಾಡಿದ ಸಾವು ಎಂದರೆ ಅದು ಚಿರು ಸರ್ಜಾ ಅವರದ್ದು.. ಅವರನ್ನೇನು ನಾವುಗಳು ನೇರವಾಗಿ ನೋಡಿಲ್ಲ.. ಮಾತನಾಡಿಸಿಲ್ಲ.. ಆದರೂ ಅವರು ತಮ್ಮ ಕುಟುಂಬದ ಮೇಲಿಟ್ಟಿದ್ದ ಪ್ರೀತಿಗೋ ಅಥವಾ ಮೇಘನಾರನ್ನು ಅತಿಯಾಗಿ ಪ್ರೀತಿಸುತ್ತಿದ್ದ ರೀತಿಗೋ.. ಅಥವಾ ಮೇಘನಾರ ಒಡಲಲ್ಲಿ ಇರುವ ಕಂದನ ಕಾರಣಕ್ಕಾಗಿಯೋ.. ಚಿರು ಇಲ್ಲವಾದದ್ದು ಈಗಲೂ ಕಾಡುತ್ತಲೇ ಇದೆ.. ಅದೇ ಕಾರಣಕ್ಕಾಗಿ ಮೇಲೆಲ್ಲೋ ನಕ್ಷತ್ರವಾಗಿರುವ ಚಿರು ನಿನ್ನೆ ಮೇಘನಾ ಅವರು ಬರೆದ ಪತ್ರಕ್ಕೆ ಉತ್ತರ ಕೊಟ್ಟರೆ ಹೀಗಿರಬಹುದೆನ್ನುವ ಕಲ್ಪನೆ..‌ ಕೆಲವರು ಇದನ್ನು ಹುಚ್ಚೆಂದುಕೊಳ್ಳುವಿರೇನೋ.. ಆದರೆ ಬಹಳ ಯೋಚಿಸಿ, ತಪ್ಪು ಒಪ್ಪುಗಳ ಬದಿಯಲ್ಲಿಟ್ಟು ಬರೆಯಲೇ ಬೇಕೆನಿಸಿ ಬರೆದಿರುವೆ.. ಇದನ್ನು ನಾನು ಚಿರುವಿಗೆ ನನ್ನ ಬರವಣಿಗೆಯ ಅಂತಿಮ ನಮನ ಎಂದುಕೊಳ್ಳುವೆ.. ಚಿರುವಿನ ಮನದಾಳದ ಮಾತುಗಳು ಇವಿರಬಹುದು.. ಈ ಮಾತುಗಳಿಂದ ಒಂದು ಜೀವಕ್ಕೆ ಸಾಂತ್ವಾನ ಸಿಕ್ಕರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ.. ಚಿರು ನಕ್ಷತ್ರವಾಗಿ ಹೇಳಿರಬಹುದಾದ ಮಾತುಗಳು..

“ಮನುಷ್ಯನ ಮೇಲಿನ ಪ್ರೀತಿ ಆತ ಇಲ್ಲವಾದಾಗ ತಿಳಿಯುತ್ತದೆ.. ಆದರೆ ಆ ಪ್ರೀತಿ‌ ನೋಡಲು ಆತನೇ ಇರುವುದಿಲ್ಲ ಎಂಬ ಮಾತು ಅಕ್ಷರಶಃ ಸತ್ಯ.. ನಾನಿಲ್ಲವಾದಾಗ ನಿಮ್ಮೆಲ್ಲರ ಪ್ರೀತಿಯ ಮೇಲೆಲ್ಲೋ ನಿಂತು ನಾ ಕಂಡೆ.. ನನಗೆನೋ ಇಷ್ಟು ಆತುರವಾಗಿ ಹೋಗುವ ಆಸೆಯಿರಲಿಲ್ಲ.. ಕೆಲ ತಿಂಗಳಲ್ಲಿ ಬರುವ ಕಂದನ ಬಗ್ಗೆ ಸಾವಿರ ಕನಸು ಕಟ್ಟಿದ್ದೆ.. ಭವಿಷ್ಯದಲ್ಲಿ ಹತ್ತಾರು ಗುರಿಗಳಿದ್ದವು.. ಆದರೆ ವಿಧಿಯನ್ನು ಎದುರಿಸಲು ನನ್ನ ಆಸೆ ಕನಸುಗಳಿಗೆ ಸಾಧ್ಯವಾಗಲಿಲ್ಲ.. ನೀವೆಲ್ಲರು ಕೊರಗುವುದ ಅಲ್ಲೆಲ್ಲೋ ದೂರದಲಿ ಕಾಣದ ಹಾಗೆ ನಿಂತು ನಾ ಕಂಡೆ.. ನೀವೆಲ್ಲಾ ನನಗಾಗಿ ಮರುಗುವುದ ಕಂಡೆ.. ನನ್ನ ಕುಟುಂಬಕ್ಕೆ ನೀವು ಕೊಟ್ಟ ಸಾಂತ್ವಾನವ ಕಂಡೆ.. ಮನತುಂಬಿ ಬಂದಿದೆ.. ಆದರೆ ಹೇಳಿಕೊಳ್ಳಲಾಗದಷ್ಟೇ..

ಕುಟ್ಟಿಮಾ.. ಬಾರಿ ಬಾರಿ ಎಷ್ಟು ಬಾರಿ ಪ್ರಯತ್ನಿಸಿದರು ನಿನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿತಿ ನಿನ್ನದೆಂದೆ ನೀನು.. ಆದರೆ ನಿನ್ನ ಮನದಾಳದ ಮಾತ ಪದಗಳಿಲ್ಲದೆಯೇ ಅರ್ಥೈಸಿಕೊಳ್ಳಬಲ್ಲೇ ನಾನು..

ನನ್ನ ಮೇಲಿನ ಪ್ರೀತಿ, ಹುಚ್ಚು, ವಿಶ್ವಾಸದ ಬಗ್ಗೆ ಮಾತನಾಡಲು ಶಬ್ದಕೋಶದಲ್ಲಿ ಪದಗಳೇ ಸಾಲುತ್ತಿಲ್ಲ ಎಂದೇ ನೀನು.. ನನ್ನಂತೆ ನಿನ್ನ ಜೀವನದ ಶಬ್ದಕೋಶವೇ ನಾನಾಗಿದ್ದೆ ಎಂಬುದ ಅರ್ಥೈಸಿಕೊಳ್ಳಬಲ್ಲೇ ನಾನು..

ನಿನ್ನ ಆತ್ಮದ ಅರ್ಧ ಭಾಗವೇ ನಾನೆಂದಿರುವೆ ನೀನು.. ಆದರೆ ಹೋಗುವ ಮುನ್ನ ನನ್ನ ಸಂಪೂರ್ಣ ಆತ್ಮವ ನಿನ್ನ ಬಳಿಯೇ ಬಿಟ್ಟು ಹೋಗಿರುವೆ ನಾನು..

ಪ್ರತಿ ದಿನ ಮನೆಯ ಬಾಗಿಲು ನೋಡುತ್ತಾ ನನಗಾಗಿ ಕಾಯಬೇಡ.. ನಾನು ಬಾರದಿದ್ದಾಗ ಮನ ನೋಯಿಸಿಕೊಳ್ಳಬೇಡ.. ನೀ ನೊಂದುಕೊಂಡರೆ ನಿನಗಿಂತ ಹೆಚ್ಚಾಗಿ ಹೊರಗೆಲ್ಲೂ ಹೋಗದ ಹಾಗೆ ನಿನ್ನ ಮನದಲ್ಲಿಯೇ ಸದಾ ಇರುವ ನನಗೆ ಹೆಚ್ಚು ನೋವಾಗುವುದು..

ನನ್ನನ್ನು ಸ್ಪರ್ಶಿಸಲಾಗದೆ ನಿನ್ನ ಕಾಲ್ಕೆಳಗಿನ ಭೂಮಿ ಕುಸಿಯುವಂತೆ ಭಾವಿಸಬೇಡ.. ನಿನ್ನ ಒಡಲಲ್ಲಿನ ನಮ್ಮ ಕಂದನ ಮೂಲಕ ಸ್ಪರ್ಷಿಸುತ್ತಲೇ ಇರುವೆ ನಾನು‌..

ನೀ ಹೇಳಿದಂತೆ.. ಮಗುವ ನೋಡುವ ಕಾತುರ ನಿನ್ನದು.. ಮಗುವಿಗೆ ಜನ್ಮ ನೀಡುವ ಕಾತುರ ನಿನ್ನದು.. ಮಗುವಿನ ಮೂಲಕ ನನ್ನ ನಗು ನೋಡುವ ಕಾತುರ ನಿನ್ನದು.. ಅಷ್ಟೇ ಕಾತುರ ನನ್ನಲ್ಲಿಯೂ ಇದೆ.. ನಿನ್ನ ಮಡಿಲಲ್ಲಿ ಮಗುವಾಗಿ ಮತ್ತೊಮ್ಮೆ ಮಲಗುವಾಸೆ.. ನಿನ್ನ ಮಗನಾಗಿ‌ ಹುಟ್ಟಿ ಬಂದು ಅರ್ಧಕ್ಕೆ ನಿಂತ ಎಲ್ಲಾ ಜವಬ್ದಾರಿಗಳ ಪೂರೈಸುವಾಸೆ.. ನಿನ್ನ ಕಂದನಾಗಿ ನಿನ್ನ ಕೊನೆವರೆಗೂ ಕಾಯುವಾಸೆ.. ಮಗನಾದರೂ ನಿನ್ನ ಮಗುವಂತೆ ನೋಡಿಕೊಳ್ಳುವ ಆಸೆ.. ನಿನ್ನ ಗಟ್ಟಿತನ ಇದೆಲ್ಲವನ್ನೂ ಸಾಕಾರ ಮಾಡಬಲ್ಲದು.. ನಿನ್ನ ಧೈರ್ಯ ಇದೆಲ್ಲವನ್ನೂ ನಿಜವಾಗಿಸಬಲ್ಲದು..

ನೀ ಹೇಳಿದಂತೆ ನಿನ್ನ ಜೊತೆ ನಾನೆಂದೂ ಸದಾ ಚಿರಂಜೀವಿಯೇ.. ಉಸಿರಿಗೂ ಮೀರಿದ ಪ್ರೀತಿ ನಮ್ಮದು.. ಆದರೆ ನೀ ಹೇಳಿದಂತೆ ಎಂದೂ ಕೂಡ ದಿಗಂತದ ಈ ಕೊನೆಯಲ್ಲಿ ನಿನಗಾಗಿ ನಾ ಎಂದೂ ಕಾಯುವುದಿಲ್ಲ.. ನಾನು ಅರ್ಧಕ್ಕೆ ಬಿಟ್ಟು ಬಂದ ಆಯಸ್ಸೂ ಕೂಡ ನಿನಗಾಗಿಯೇ ಇರಲಿ.. ಮಗುವಾಗಿ ಬರುವ ನನ್ನ ಜೊತೆ ನೂರ್ಕಾಲ ಸಂತೋಷವಾಗಿ ಬಾಳಿ ಬದುಕುವ ಜೀವನ ನಿನ್ನದಾಗಬೇಕು.. ಕನಸಿನಲ್ಲಿಯೂ ಕುಗ್ಗಬೇಡ… ನೀ ಕುಗ್ಗಿದರೆ ನಾ ಸೋತಂತೆ.. ನನ್ನ ಸೋಲ ನೀ ಎಂದೂ ನೋಡುವುದಿಲ್ಲ ಎಂದುಕೊಳ್ಳುವೆ..

ಹೆಣ್ಣಿಗೆ ಅಪಾರ ಶಕ್ತಿ ಇದೆ.. ಆಕೆ ಏನು ಬೇಕಾದರೂ ಮಾಡಬಲ್ಲಳು‌.. ನೀ ಗಟ್ಟಿತನದಿಂದಿರಬೇಕು.. ದೈಹಿಕವಾಗಿ ನಾನಿಲ್ಲವಾದರೂ‌ ನಿನ್ನ ಜೊತೆ ನಾ ಸದಾ ಶಕ್ತಿಯಾಗಿ ನಿಲ್ಲುವೆ.. ಹೊಸ ಬದುಕ ಕಟ್ಟಿಕೋ.. ಹೊಸ ಚೇತನ ನಿನ್ನಲ್ಲಿ‌‌ ಮೂಡಲಿ.. ಬದುಕಿನ ವಾಸ್ತವವನ್ನು ಕಲ್ಲು ಮನಸ್ಸು ಮಾಡಿ ಅರ್ಥ ಮಾಡಿಕೊಂಡುಬಿಡು.. ನೀ ಬದುಕಲಿ ಗೆದ್ದರೆ.. ನಮ್ಮ ಮಗುವನ್ನು ಬದುಕಿನಲಿ ಗೆಲ್ಲಿಸಿದರೆ ನಾ ಗೆದ್ದಂತೆ.. ಜೀವನವಿಡೀ ಜೊತೆಗಿರುವೆ ಎಂದಿದ್ದೆ ನಾನು.. ಆದರೆ ನನ್ನ ಕೈ ಮೀರಿ ಎಲ್ಲವೂ ನಡೆದು ಹೋಯಿತು.. ಸಾಧ್ಯವಾದರೆ ಕ್ಷಮಿಸಿಬಿಡು ಒಮ್ಮೆ.. ನಾನೆಂದೂ ಸದಾ ನಿನ್ನಲ್ಲಿ ಜೀವಂತ.. ನಮ್ಮ ಕಂದನಲ್ಲಿ ಜೀವಂತ.. ನಿನ್ನೊಳಗೆ ಇದ್ದು ನಿನ್ನನ್ನು ರಕ್ಷಾ ಕವಚದಂತೆ ಸದಾ ಕಾಯುವೆ.. ಲವ್ ಯು ಕುಟ್ಟಿಮಾ..

ನನಗಾಗಿ ಮನೆಯಲ್ಲಿ ಪ್ರತಿದಿನ ಕಾಯುತ್ತಿದ್ದ ಅಮ್ಮ, ನಾ ಮಾಡಿದ ಪುಣ್ಯಕ್ಕೆ ನನ್ನ ತಮ್ಮನಾಗಿ ಹುಟ್ಟಿದ ಧೃವ, ಕುಟುಂಬದ ಪ್ರತಿಯೊಬ್ಬರೂ ಸಹ ಸಾಧ್ಯವಾದರೆ ಕ್ಷಮಿಸಿಬಿಡಿ.. ಆದರೆ ನಿಮ್ಮೆಲ್ಲರ ಆಸೆಯಂತೆ ಖಂಡಿತವಾಗಿಯೂ ಮತ್ತೊಮ್ಮೆ ನನ್ನ ಮಗನಾಗಿ ನಾನೇ ನಿಮ್ಮ ಮಡಿಲು ಸೇರುವೆ.. ನೀವು ಆಸೆಪಟ್ಟಂತೆ ನಗು ಮುಖದಿ ನಿಮ್ಮ ಮುಂದೆ ಬರುವೆ…. ಇಂತಿ…. ನಿಮ್ಮೆಲ್ಲರ ಮನದಲ್ಲಿ ಸದಾ ಚಿರಂಜೀವಿಯಾಗಿರುವ ನಿಮ್ಮ ಮನೆ ಮಗ ಚಿರು..

ಇಷ್ಟು ದಿನ ಎಷ್ಟೋ ಜೀವಗಳ ಭಾವನೆಗೆ ಬರವಣಿಗೆ ಯಾಗಿದ್ದೇನೆ.. ಆದರಿಂದು ಚಿರು ಅವರ ಭಾವನೆಗಳ ಬರವಣಿಗೆ ಮೂಲಕ ಜೀವಂತವಾಗಿಸುವ ವೇಳೆ ಕಣ್ಣಲ್ಲೇಕೋ ನೀರು ಜಾರಿ ಬಂತು.. ಕ್ಷಮೆ ಇರಲಿ.. -ರಮ್ಯ ಜಗತ್, ಮೈಸೂರು..