ಪಕ್ಕಾ ಹೊಟೆಲ್ ಶೈಲಿಯ ಬಿಸಿ ಬೇಳೆ ಬಾತ್ ಮಾಡುವ ಸಿಂಪಲ್ ವಿಧಾನ.. ಮಾಡಿ.. ಬಿಸಿ ಬಿಸಿಯಾಗಿ ಸವಿಯಿರಿ..

ಬಿಸಿಬೇಳೆ ಬಾತ್ ಮಾಡೋ ವಿಧಾನ ತುಂಬಾ ಕಷ್ಟ. ಆದರೂ ಎಲ್ಲರಿಗೂ ಬಿಸಿಬೇಳೆ ಬಾತ್ ಅಂದ್ರೆ ತುಂಬಾನೆ ಇಷ್ಟ. ಬಿಸಿಬೇಳೆ ಬಾತ್ ಅನ್ನು ಸಾಧಾರಣವಾಗಿ ಕಾರ ಬೂಂದಿ ಅಥವಾ ಮೊಸರು ಬಜ್ಜಿಯೊಂದಿಗೆ ಬಡಿಸುತ್ತಾರೆ. ಆದರೆ ಇದರಲ್ಲಿ ಎಲ್ಲ ತರದ ಮಸಾಲೆ, ತರಕಾರಿ, ಉಪ್ಪು, ಹುಳಿ, ಬೆಲ್ಲ ಹೀಗೆ ಎಲ್ಲವೂ ಇರುವುದರಿಂದ, ಏನೂ ಇಲ್ಲದೆ ಹಾಗೇ ಸಹ ತಿನ್ನಲು ರುಚಿಯಾಗಿರುತ್ತದೆ.

ಎಲ್ಲ ಅಡುಗೆಯಂತೆ ಬಿಸಿಬೇಳೆ ಬಾತ್ ಪಾಕ ವಿಧಾನದಲ್ಲೂ ಸಣ್ಣ ಸಣ್ಣ ವ್ಯತ್ಯಾಸಗಳೊಂದಿಗೆ, ಅನೇಕ ವಿಧಗಳಿವೆ. ಆದರೆ ಇಲ್ಲಿರುವ ಪಾಕವಿಧಾನ ಹೆಚ್ಚಾಗಿ ಎಲ್ಲೆಡೆ ಚಾಲ್ತಿಯಲ್ಲಿದ್ದು, ಬಹಳ ರುಚಿಕರವಾಗಿರುತ್ತದೆ. ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ.

ಬೇಕಾಗುವ ಪದಾರ್ಥಗಳು: 1 ಕಪ್ ತೊಗರಿಬೇಳೆ,
1 ಕಪ್ ಅಕ್ಕಿ (ಸೋನಾ ಮಸೂರಿ ಆಥವಾ ಊಟದ ಅಕ್ಕಿ), 10 ಬೀನ್ಸ್, 1 ಕ್ಯಾರೆಟ್, 1 ನವಿಲ್ ಕೋಸು, 1 ಆಲೂಗಡ್ಡೆ, 2 ಟೇಬಲ್ ಸ್ಪೂನ್ ನೆನೆಸಿದ ನೆಲಗಡಲೆ, 2 ಟೇಬಲ್ ಸ್ಪೂನ್ ನೆನೆಸಿದ ಬಟಾಣಿ, 1 ಟೊಮ್ಯಾಟೋ, 1 ನಿಂಬೆ ಗಾತ್ರದಷ್ಟು ಹುಣಿಸೆ ಹಣ್ಣು, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ.

ಬಿಸಿಬೇಳೆ ಬಾತ್ ಮಾಡುವ ವಿಧಾನ: ಕನಿಷ್ಠ 5 ಲೀಟರ್ ಸಾಮರ್ಥ್ಯದ ಪ್ರೆಶರ್ ಕುಕರ್ ತೆಗೆದುಕೊಳ್ಳಿ. ಪ್ರೆಶರ್ ಕುಕರ್’ಗೆ ತೊಗರಿಬೇಳೆ, ಅಕ್ಕಿ ಹಾಕಿ, ತೊಳೆಯಿರಿ. ನಂತರ ಬಟಾಣಿ ತರಕಾರಿಗಳನ್ನ ಹಾಕಿ. 5 ಕಪ್ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಉಪ್ಪು ಹಾಕಿ 2 ವಿಷಲ್ ಕೂಗಿಸಿ.

ಒಂದು ಪಾತ್ರೆಯಲ್ಲಿ ಎಣ್ಣೆ ಬಿಟ್ಟು, ನೆಲಗಡಲೆಯನ್ನು ಹುರಿದುಕೊಂಡು ತೆಗೆದಿಡಿ. ಇದೇ ಪಾತ್ರೆಗೆ ಕರಿಬೇವು, ಒಣ ಮೆಣಸು, ಈರುಳ್ಳಿ ಹಾಕಿ ಹುರಿಯಿರಿ. ನಂತರ ಟೊಮ್ಯಾಟೋ ಸೇರಿಸಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಬಿಸಿಬೇಳೆ ಬಾತ್ ಪೌಡರ್ ಹಾಕಿ ಕಲಸಿ. ನಂತರ ಬೇಯಿಸಿದ ತರಕಾರಿ ಅನ್ನ, ನೀರು ಸೇರಿಸಿ ಮಿಕ್ಸ್ ಮಾಡಿ. ಈಗ ಬೇಕಾದಷ್ಟು ನೀರು ಸೇರಿಸಿ, ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. ಕೊನೆಯಲ್ಲಿ ನೆಲಗಡಲೆ ಹಾಕಿದರೆ ಬಿಸಿಬೇಳೆ ಬಾತ್ ಸಿದ್ಧ.

ಇದನ್ನು ಬಿಸಿ ಬಿಸಿಯಾಗಿ ತಿನ್ನಲು ರುಚಿ, ಆದ್ದರಿಂದಲೇ ಹೆಸರು “ಬಿಸಿ-ಬೇಳೆ ಬಾತ್” ಎಂದು ಇರಬಹುದು. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಬಡಿಸಿ. ಹಾಗೇ ಸಹ ತಿನ್ನಬಹುದು.