ನಿನ್ನೆಯಷ್ಟೇ ಚೆನ್ನಾಗಿದ್ದ ಕನ್ನಡದ ಖ್ಯಾತ ನಟ ಅಶೋಕ್ ರಾವ್ ಇನ್ನಿಲ್ಲ.. ನಿಜಕ್ಕೂ ಏನಾಯ್ತು ಗೊತ್ತಾ..

ಕಳೆದ ಎರಡು ವರ್ಷಗಳಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪೆಟ್ಟುಗಳು ಬೀಳುತ್ತಲೇ ಇವೆ. ಕರೊನಾ ಸಂಕಷ್ಟ ಶುರುವಾದ ನಂತರ ಸಿನಿಮಾಗಳ ಮೇಲೆ ಕಲಾವಿದರ ಮೇಲೆ ಅದು ದೊಡ್ಡ ಪರಿಣಾಮ ಬೀರಿತು. ನಂತರ ಕರೊನಾ ಇಂದಾಗಿ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿಂದಾಗಿ ಹಲವು ಕಲಾವಿದರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು. ಈಗಲೂ ಇಂತಹ ವಿಚಾರಗಳು ಕೇಳಿ ಬರುವುದು ಕಡಿಮೆಯಾಗಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ 3 ತಿಂಗಳು ಕಳೆದಿದ್ದು ಆ ನೋವಿನಿಂದ ಚಿತ್ರರಂಗಕ್ಕೆ ಮತ್ತು ಜನರಿಗೆ ಇನ್ನು ಹೊರಬರಲು ಸಾಧ್ಯವಾಗಿಲ್ಲ. ಅದಾದ ಬಳಿಕ ಹಿರಿಯನಟ ಶಿವರಾಮ್ ಅವರನ್ನು ಕಳೆದುಕೊಂಡೆವು, ಅದಕ್ಕಿಂತ ಮೊದಲು ನಿರ್ಮಾಪಕ ರಾಮು, ಪುಟ್ಟಣ್ಣ ಕಣಗಾಲ್ ಅವರ ಮಗ ಕಣಗಾಲ್ ರಾಮು, ನಟ ಸಂಚಾರಿ ವಿಜಯ್ ಹೀಗೆ ಅನೇಕ ಕಲಾವಿದರನ್ನು ಚಿತ್ರರಂಗ ಕಳೆದುಕೊಂಡಿತು. ಇದೀಗ ಮತ್ತೊಬ್ಬ ಹಿರಿಯ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ.

ಸ್ಯಾಂಡಲ್ ವುಡ್ ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಖ್ಯಾತ ಹಿರಿಯ ಪೋಷಕ ನಟ ಅಶೋಕ್ ರಾವ್ ಅವರು ವಿಧಿವಶರಾಗಿದ್ದಾರೆ. ನಿನ್ನೆ ಮಧ್ಯರಾತ್ರಿ 12:30ರ ಸಮಯಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಶೋಕ್ ರಾವ್ ಅವರ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಇಂತಹ ಒಬ್ಬ ಅದ್ಭುತವಾದ ಹಿರಿಯ ಕಲಾವಿದರನ್ನು ಕಳೆದುಕೊಂಡಿದ್ದು ನಿಜಕ್ಕೂ ತುಂಬಾ ದುಃಖದ ಸಂಗತಿ. ಅಣ್ಣಾವ್ರು ಅಭಿನಯಿಸಿದ ಸೂಪರ್ ಹಿಟ್ ಪರಶುರಾಮ ಸಿನಿಮಾದಲ್ಲಿ ಅಶೋಕ್ ರಾವ್ ಅವರು ಅಣ್ಣಾವ್ರ ಎದುರಿಗೆ ಖಡಕ್ ವಿಲ್ಲನ್ ಆಗಿ ನಟಿಸಿದ್ದರು. ಆ ಪಾತ್ರವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ಆ ಪಾತ್ರಕ್ಕಿದ್ದ ಗತ್ತು ಗಾಂಭೀರ್ಯ ಇದೆಲ್ಲದರಿಂದ ಅಶೋಕ್ ರಾವ್ ಅವರಿಗೆ ಮೊದಲ ಸಿನಿಮಾದಲ್ಲೇ ಬೇಡಿಕೆ ಹೆಚ್ಚಾಗಿತ್ತು.

ಅಶೋಕ್ ರಾವ್ ಅವರ ಜೀವನದ ಬಗ್ಗೆ ಹೇಳುವುದಾದರೆ. ಹಿರಿಯನಟ ಅಶೋಕ್ ಮೂಲತಃ ಕಾಸರಗೋಡ್ ನವರು. ಅಶೋಕ್ ರಾವ್ ಅವರ ತಂದೆಯವರದ್ದು ವರ್ಗಾವಣೆ ಆಗುತ್ತಿದ್ದ ಕೆಲಸ ಆಗಿರುವ ಕಾರಣ, ಅಶೋಕ್ ರಾವ್ ಅವರು ಬೆಳೆದದ್ದು ತಮಿಳು ನಾಡಿನಲ್ಲಿ. ಓದಿನಲ್ಲಿ ಮುಂದಿದ್ದ ಅಶೋಕ್ ರಾವ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದರು, ಚಿಕ್ಕ ವಯಸ್ಸಿನಿಂದಲು ನಾಟಕದಲ್ಲಿ ಆಸಕ್ತಿ ಇದ್ದ ಕಾರಣ, ಓದಿದ ನಂತರ ರಂಗಭೂಮಿಗೆ ಎಂಟ್ರಿ ಕೊಟ್ಟರು. ಅನೇಕ ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದರು ಅಶೋಕ್ ರಾವ್. ಒಮ್ಮೆ ಅಣ್ಣಾವ್ರ ಕಣ್ಣಿಗೆ ಬಿದ್ದರು, ಆ ಸಮಯದಲ್ಲಿ ಪರಶುರಾಮ ಸಿನಿಮಾಗೆ ಪಾತ್ರಗಳ ಆಯ್ಕೆ ನಡೆಯುತ್ತಿತ್ತು.

ಅಶೋಕ್ ರಾವ್ ಅವರನ್ನು ನೋಡಿದ ತಕ್ಷಣವೇ ವಿಲ್ಲನ್ ಪಾತ್ರಕ್ಕೆ ಅವರು ಸರಿ ಹೋಗುತ್ತಾರೆ ಎಂದು ಅಣ್ಣಾವ್ರಿಗೆ ಅನ್ನಿಸಿ, ಅಶೋಕ್ ಅವರನ್ನು ಸ್ವತಃ ಅಣ್ಣಾವ್ರು ಸೆಲೆಕ್ಟ್ ಮಾಡಿದರು. ಕೆಲವು ದಿನಗಳ ಕಾಲ ಅಶೋಕ್ ಅವರಿಗೆ ಟ್ರೈನಿಂಗ್ ನೀಡಿ, ನಂತರ ಚಿತ್ರೀಕರಣ ಶುರು ಮಾಡಲಾಯಿತು. ಅಶೋಕ್ ಅವರ ಅಭಿನಯದಿಂದ ಮೊದಲ ಸಿನಿಮಾದಲ್ಲೇ ಅಣ್ಣಾವ್ರ ಎದುರು ಖಡಕ್ ವಿಲ್ಲನ್ ಆಗಿ ನಿಂತು ತಮ್ಮದೇ ಆರ ಛಾಪು ಮೂಡಿಸಿದರು. ಅದ್ಭುತವಾದ ನಟನೆ ಹಾಗೂ ಅವರ ಪ್ಲಸ್ ಪಾಯಿಂಟ್ ಆಗಿದ್ದು ಅವರ ಕಂಚಿನ ಕಂಠ. ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತಾ ಹೋದವು. ಅನೇಕ ಸಿನಿಮಾಗಳಲ್ಲಿ ವಿಲ್ಲನ್ ಆಗಿ, ಮುಖ್ಯಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಅಶೋಕ್ ರಾವ್ ಅವರು ನಟಿಸಿದ್ದಾರೆ.

ಇವರಿಗೆ ಅವಕಾಶಗಳ ಕೊರತೆ ಅನ್ನುವ ಸಮಸ್ಯೆ ಬರಲೇ ಇಲ್ಲ. ಹಿರಿಯ ಕಲಾವಿದರಿಂದ ಹಿಡಿದು ಇತ್ತೀಚಿನ ಕಲಾವಿದರ ಸಿನಿಮಾಗಳಲ್ಲಿ ಸಹ ಅಶೋಕ್ ರಾವ್ ಅವರು ಒಂದಲ್ಲಾ ಒಂದು ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆಯಲ್ಲಿ ವೈವಿಧ್ಯತೆ ತೋರಿಸಿ, ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದ ಅಪರೂಪದ ನಟರಲ್ಲಿ ಇವರು ಕೂಡ ಒಬ್ಬರು. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಕಲಾವಿದರು ಬಂದು ಹಾಗೂ ಈಗಿನ ಟ್ರೆಂಡ್ ಬದಲಾದ ಕಾರಣ ಅಶೋಕ್ ರಾವ್ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಡಿಮೆ ಆಗಿತ್ತು. ಕೆಲವು ದಿನಗಳ ಹಿಂದೆ ಇವರಿಗೆ ಕ್ಯಾನ್ಸರ್ ಸೋಂಕು ತಗುಲಿತ್ತು.

ನಿರಂತರವಾಗಿ ಅಶೋಕ್ ಅವರಿಗೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪ್ರತಿದಿನ ಸತತವಾಗಿ ಚಿಕಿತ್ಸೆ ಕೊಡುತ್ತಿದ್ದರು. ನಿನ್ನೆ ಸಹ ಚಿಕಿತ್ಸೆ ಪಡೆದ ನಂತರ ಚೆನ್ನಾಗಿಯೇ ಇದ್ದರು ಎನ್ನಲಾಗಿದ್ದು, ಇದ್ದಕ್ಕಿದ್ದ ಹಾಗೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಮಗ ಮತ್ತು ಸೊಸೆಯನ್ನು ಅಗಲಿದ್ದಾರೆ ಹಿರಿಯನಟ ಅಶೋಕ್ ರಾವ್. ಈ ಸುದ್ದಿ ಕೇಳಿ ಕನ್ನಡ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ. ಇಂತಹ ಪ್ರತಿಭೆಯನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅನೇಕ ಮರೆಯಲಾಗದ ಪಾತ್ರಗಳಲ್ಲಿ ಅಶೋಕ್ ರಾವ್ ನಟಿಸಿದ್ದಾರೆ, ಅವರು ಅಭಿನಯಿಸಿರುವ ಪಾತ್ರಗಳಲ್ಲಿ ನಿಮ್ಮಿಷ್ಟದ ಪಾತ್ರ ಯಾವುದು ಎಂದು ಕಮೆಂಟ್ಸ್ ಮೂಲಕ ತಪ್ಪದೇ ತಿಳಿಸಿ..