ಸಿಹಿ ಸುದ್ದಿ ಹಂಚಿಕೊಂಡ ಸ್ಯಾಂಡಲ್ವುಡ್ ನಟಿ ಪ್ರಣೀತಾ..

ಕನ್ನಡ ಚಿತ್ರರಂಗ ಕಂಡ ಮುದ್ದು ಮುಖದ ನಟಿಯರಲ್ಲಿ ಒಬ್ಬರು ಪ್ರಣೀತಾ ಸುಭಾಷ್. ಸ್ಯಾಂಡಲ್ ವುಡ್ ಮೂಲಕ ನಟನೆಯ ಜರ್ನಿ ಆರಂಭಿಸಿ, ಇಂದು ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ನಟಿ ಇವರು. ಆದರೆ ಅಪ್ಪಟ ಕನ್ನಡತಿಯಾಗಿರುವ ಪ್ರಣೀತಾ ಸುಭಾಷ್ ಅವರು ಕರ್ನಾಟಕದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಕಳೆದ ವರ್ಷವಷ್ಟೇ ಮದುವೆಯಾದ ನಟಿ ಪ್ರಣೀತಾ ಸುಭಾಷ್ ಅವರು ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ತಾಯಿ ಆಗುತ್ತಿರುವ ಸಂತೋಷದ ವಿಚಾರ ತಿಳಿಸಿದ್ದಾರೆ ಪ್ರಣೀತಾ.

ನಟಿ ಪ್ರಣೀತಾ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲೇ. ಪ್ರಣೀತಾ ಅವರು ಮೊದಲು ನಟಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿದ ಪೊರ್ಕಿ ಸಿನಿಮಾ ಮೂಲಕ. ಮೊದಲ ಸಿನಿಮಾದಲ್ಲೇ ದರ್ಶನ್ ಅವರ ಜೊತೆ ಅಭಿನಯಿಸಿ ಸ್ಟಾರ್ ನಟಿಯ ಪಟ್ಟ ಗಿಟ್ಟಿಸಿಕೊಂಡರು ಪ್ರಣೀತಾ. ಅದಾದ ಬಳಿಕ ಕನ್ನಡದಲ್ಲಿ ದುನಿಯಾ ವಿಜಯ್ ಅವರೊಡನೆ, ಪ್ರಜ್ವಲ್ ಅವರೊಡನೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿ ಪ್ರಣೀತಾ ಅಭಿನಯಿಸಿದರು. ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗದಿಂದ ಒಳ್ಳೆಯ ಅವಕಾಶಗಳು ಸಿಗಲು ಶುರುವಾದವು.

ತೆಲುಗು ಮತ್ತು ತಮಿಳಿನಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿದ್ದ ಕಾರಣ ಪ್ರಣೀತಾ ಸುಭಾಷ್ ಅವರು ಅಲ್ಲಿಯೇ ಹೆಚ್ಚಿನ ಸಿನಿಮಾಗಳಲ್ಲಿ ಅದರಲ್ಲೂ ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದರು. ಬಳಿಕ ಬಾಲಿವುಡ್ ಗು ಎಂಟ್ರಿ ಕೊಟ್ಟು, ಅಲ್ಲಿ ಸಹ ಬೇಡಿಕೆಯ ನಟಿಯಾದರು. ಯಾವ ಚಿತ್ರರಂಗಕ್ಕೆ ಹೋಗಿ, ಎಷ್ಟೇ ಹೆಸರು ಮಾಡಿದ್ದರು ಸಹ, ಪ್ರಣೀತಾ ಅವರು ಕನ್ನಡ ಮತ್ತು ಕರ್ನಾಟಕವನ್ನು ಮರೆಯಲಿಲ್ಲ. ಪ್ರಣೀತಾ ಫೌಂಡೇಷನ್ಸ್ ಹೆಸರಿನ ಸಂಸ್ಥೆ ಶುರು ಮಾಡಿ, ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿದ್ದಾರೆ.

ಇದಲ್ಲದೆ, ಇನ್ನು ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ನಟಿ ಪ್ರಣೀತಾ. ಲಾಕ್ ಡೌನ್ ಸಮಯದಲ್ಲಿ ತಮ್ಮ ಫೌಂಡೇಷನ್ಸ್ ವತಿಯಿಂದ, ಸಾಕಷ್ಟು ಜನರಿಗೆ ಸಹಾಯ ಮಾಡಿದರು ನಟಿ ಪ್ರಣೀತಾ. ಕಳೆದ ವರ್ಷ ಉದ್ಯಮಿ ನಿತಿನ್ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆಯಿತು. ಆದರೆ ಇವರ ಮದುವೆ ವಿಷಯ ತಿಳಿದಿದ್ದು ಕುಟುಂಬದವರು ಮತ್ತು ಕೆಲವೇ ಕೆಲವು ಸ್ನೇಹಿತರಿಗೆ ಮಾತ್ರ. ಗುಟ್ಟಾಗಿಯೇ ಈ ಜೋಡಿಯ ಮದುವೆ ನಡೆಯಿತು.

ಇದೀಗ ಮದುವೆ ಆಗಿ ಇನ್ನೇನು ಒಂದು ವರ್ಷ ಕಳೆಯುವ ಸಮಯದಲ್ಲಿ, ಈ ಜೋಡಿ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಪ್ರಣೀತಾ ಅವರ ಗಂಡನ 34ನೇ ವರ್ಷದ ಹುಟ್ಟುಹಬ್ಬದ ಶುಭದಿನದಂದು, ಪ್ರಣೀತಾ ಅವರು ತಾಯಿ ಆಗುತ್ತಿರುವ ವಿಚಾರ ತಿಳಿಸಿದ್ದಾರೆ.. “ನನ್ನ ಗಂಡನ 34ನೇ ವರ್ಷದ ಹುಟ್ಟುಹಬ್ಬಕ್ಕೆ, ಮೇಲಿನ ಏಂಜಲ್ ನಮಗೆ ಒಂದು ಪ್ರೆಸೆಂಟ್ ನೀಡಿದ್ದಾರೆ..” ಎಂದು ಬರೆದು ಸ್ಕ್ಯಾನಿಂಗ್ ರಿಪೋರ್ಟ್ ಜೊತೆಗೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ ನಟಿ ಪ್ರಣೀತಾ. ಈ ಸಿಹಿ ಸುದ್ದಿ ಕೇಳಿ, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಪ್ರಣೀತಾ ಅವರಿಗೆ ಶುಭ ಕೋರಿದ್ದಾರೆ.